ಒಟ್ಟವಾ:ರಷ್ಯಾ ವಜ್ರಗಳ ಮೇಲೆ ಹೆಚ್ಚುವರಿ ಆಮದು ನಿರ್ಬಂಧವನ್ನು ಹೇರುತ್ತಿರುವುದಾಗಿ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ. ಈಗಾಗಲೇ ಕೆನಡಾ 2023ರ ಡಿಸೆಂಬರ್ನಿಂದ ರಷ್ಯಾದಿಂದ ವಜ್ರ ಮತ್ತು ವಜ್ರಾಧಾರಿತ ಆಭರಣಗಳ ಆಮದಿನ ನಿರ್ಬಂಧದ ಬಗ್ಗೆ ನಿರ್ಧರಿಸಿತ್ತು. ಇದೀಗ 1 ಕ್ಯಾರೆಟ್ ಮತ್ತು ಅದಕ್ಕಿಂತ ಹೆಚ್ಚಿನ ತೂಕದ ರಷ್ಯಾದ ವಜ್ರಗಳನ್ನು ಗುರಿಯಾಗಿಸಿ ಮತ್ತೆ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಕೆನಡಾವು ರಷ್ಯಾದ ಪುಟಿನ್ ಆಡಳಿತದ ಆರ್ಧಿಕತೆ ಮೇಲೆ ಒತ್ತಡ ಹೇರಲಿದೆ. ರಷ್ಯಾವು ಉಕ್ರೇನ್ ಮೇಲೆ ಯುದ್ಧ ಆರಂಭಿಸಿದಾಗಿನಿಂದಲೂ ಸಾಕಷ್ಟು ಹಾನಿ ಉಂಟಾಗಿದೆ. ರಷ್ಯಾದ ಉತ್ಪನ್ನಗಳ ಮೇಲೆ ಆಮದು ನಿರ್ಬಂಧವನ್ನು ಹೇರುವ ಮೂಲಕ ಅವರ ಅಕ್ರಮ ಯುದ್ಧ ನೀತಿಯನ್ನು ಟೀಕಿಸಲಿದೆ. ನಮ್ಮ ಮಿತ್ರ ರಾಷ್ಟ್ರಗಳ ಜೊತೆ ಸೇರಿ ರಷ್ಯಾದ ಆಡಳಿತದ ಮೇಲೆ ನಿರ್ಬಂಧವನ್ನು ಹೇರುತ್ತಿದ್ದೇವೆ. ರಷ್ಯಾದಿಂದ ವಜ್ರಗಳನ್ನು ಖರೀದಿಸದೆ, ಅವರ ಅಕ್ರಮ ಯುದ್ಧಕ್ಕೆ ಬೆಂಬಲ ನೀಡುವುದಿಲ್ಲ ಎಂಬ ಭರವಸೆಯನ್ನು ಕೆನಡಾ ಗ್ರಾಹಕರಿಗೆ ನೀಡುತ್ತೇವೆ ಎಂದು ಸಚಿವೆ ಮೆಲಾನಿ ಹೇಳಿದ್ದಾರೆ.
ರಷ್ಯಾ ವಿಶ್ವಕ್ಕೆ ವಜ್ರ ನೀಡುವ ಅತಿದೊಡ್ಡ ರಫ್ತುದಾರನಾಗಿದೆ. ರಷ್ಯಾದಿಂದ ಕೈಗಾರಿಕೇತರ ವಜ್ರಗಳ ರಫ್ತು ಆದಾಯ ಕಡಿಮೆ ಮಾಡುವ ಕುರಿತು ಕಳೆದ ಮೇ 2023ರಲ್ಲಿ ಜಿ7 ಒಕ್ಕೂಟದ ನಾಯಕರು ನಿರ್ಧರಿಸಿದ್ದರು. ಈ ನಿರ್ಧಾರಕ್ಕೆ ತಾವು ಬದ್ಧವಾಗಿದ್ದೇವೆ ಎಂದು ರಷ್ಯಾ ತಿಳಿಸಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ತಿಳಿಸಿದೆ. ಜೊತೆಗೆ, ರಷ್ಯಾ ವಿಶ್ವದ ಅತಿ ದೊಡ್ಡ ಕಚ್ಚಾ ವಜ್ರ ಉತ್ಪಾದಕ ರಾಷ್ಟ್ರವಾಗಿದ್ದು, ಅದರ ರಫ್ತು ಮೌಲ್ಯವು 2022ರಲ್ಲಿ ಸುಮಾರು 5.2 ಶತಕೋಟಿ ಕೆನಡಿಯನ್ ಡಾಲರ್‌ಗಳನ್ನು ಮೀರಿದೆ.
ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದ ಹಿನ್ನೆಲೆ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಗಣಿಗಾರಿಕೆ, ಸಂಸ್ಕರಿಸಿದ ಅಥವಾ ಉತ್ಪಾದಿಸುವ ಕೈಗಾರಿಕಾವಲ್ಲದ ವಜ್ರಗಳ ನೇರ ಆಮದಿನ ಮೇಲೆ ನಿಷೇಧ ಘೋಷಿಸಿದ್ದವು. ಅಲ್ಲದೇ ಕೆನಡಾ ತನ್ನ ನೆಚ್ಚಿನ ದೇಶದ ಸ್ಥಾನಮಾನದಿಂದ ರಷ್ಯಾವನ್ನು ಕೈಬಿಟ್ಟಿತ್ತು. ಜೊತೆಗೆ ರಷ್ಯಾದಿಂದ ಆಮದು ಮಾಡಿಕೊಳ್ಳುವ ಎಲ್ಲಾ ವಸ್ತುಗಳ ಮೇಲೆ ಶೇ 35ರಷ್ಟು ಸುಂಕವನ್ನು ಕೂಡ ವಿಧಿಸಿದೆ. ಉತ್ಪನ್ನಗಳ ಕುರಿತ ಕಠಿಣ ಆಮದು ನೀತಿಯಿಂದ ರಷ್ಯಾದ ರಫ್ತು ಮೌಲ್ಯದಲ್ಲಿ ತೀವ್ರ ಇಳಿಕೆ ಕೂಡ ಕಂಡಿತ್ತು. ಜಿ7 ರಾಷ್ಟ್ರಗಳು ಜಗತ್ತಿನ ವಜ್ರದ ಮಾರುಕಟ್ಟೆಯಲ್ಲಿ ಶೇ. 70ರಷ್ಟು ವಜ್ರ ಖರೀದಿಯನ್ನು ಹೊಂದಿವೆ. ರಷ್ಯಾದ ವಜ್ರಗಳ ಮೇಲಿನ ನಿರ್ಬಂಧವು ಭಾರತದ ವಜ್ರ ಮಾರುಕಟ್ಟೆ ಉದ್ಯಮದ ಮೇಲೂ ಪರಿಣಾಮ ಬೀರಿದೆ. (ಐಎಎನ್ಎಸ್)
ಇದನ್ನೂ ಓದಿ: ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಸೂರ್ಯಕಾಂತಿ ರೂಪದ ಡೈಮಂಡ್ ರಿಂಗ್!