ವಾಷಿಂಗ್ಟನ್ ಡಿಸಿ, ಅಮೆರಿಕ:ಅಮೆರಿಕಕ್ಕೆ ಫೆಂಟನಿಲ್ ಹರಿವನ್ನು ತಡೆಯುವ ಉದ್ದೇಶದಿಂದ ಕೆನಡಾ 1.3 ಶತಕೋಟಿ ಡಾಲರ್ ಗಡಿ ಯೋಜನೆ ಜಾರಿಗೆ ತರಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಜನೆಯ ಅನುಷ್ಠಾನದ ನಂತರ 30 ದಿನಗಳವರೆಗೆ ಕೆನಡಾದ ಸರಕುಗಳ ಮೇಲಿನ ಸುಂಕವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿರುವುದಾಗಿ ಟ್ರಂಪ್ ಹೇಳಿದ್ದಾರೆ.
ನಾವು ಸುರಕ್ಷಿತ ಉತ್ತರ ಗಡಿ ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಕೆನಡಾ ಒಪ್ಪಿಕೊಂಡಿದೆ ಮತ್ತು ಅಂತಿಮವಾಗಿ ನಮ್ಮ ದೇಶಕ್ಕೆ ಬರುತ್ತಿರುವ ಫೆಂಟಾನಿಲ್‌ನಂತಹ ಮಾರಣಾಂತಿಕ ಔಷಧವನ್ನು ನಿರ್ಮೂಲನೆ ಮಾಡಲು ಕ್ರಮ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಅಕ್ರಮವಾಗಿ ಸರಬರಾಜಾಗುತ್ತಿರುವ ಔಷಧಗಳಿಂದ ನೂರಾರು ಅಮೆರಿಕನ್ನರು ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು ನಾವು ಬದ್ಧವಾಗಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಗಡಿ ಯೋಜನೆ ಕುರಿತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೇಳಿಕೆಯನ್ನು ಇದೇ ವೇಳೆ ಟ್ರಂಪ್ ಉಲ್ಲೇಖಿಸಿದ್ದಾರೆ. ಹೊಸ ವಿಮಾನಗಳು, ತಂತ್ರಜ್ಞಾನ ಮತ್ತು ಸಿಬ್ಬಂದಿಗಳೊಂದಿಗೆ ಗಡಿ ಸುರಕ್ಷತೆ ಬಲಪಡಿಸಲಾಗುವುದು. ಅಮೆರಿಕನ್ ಪಾಲುದಾರಿಕೆಯೊಂದಿಗೆ ವರ್ಧಿತ ಸಮನ್ವಯ ಸಾಧಿಸುವುದು ಮತ್ತು ಫೆಂಟನಿಲ್ ಹರಿವು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಟ್ರುಡೋ ಭರವಸೆ ನೀಡಿದ್ದಾರೆ.
"ಅಧ್ಯಕ್ಷನಾಗಿ ಎಲ್ಲ ಅಮೆರಿಕನ್ನರ ಸುರಕ್ಷತೆ ಖಾತ್ರಿಪಡಿಸುವುದು ನನ್ನ ಜವಾಬ್ದಾರಿಯಾಗಿದೆ. ಮತ್ತು ನಾನು ಅದನ್ನು ಮಾಡುತ್ತಿದ್ದೇನೆ. ಈ ಆರಂಭಿಕ ಫಲಿತಾಂಶದಿಂದ ನಾನು ತುಂಬಾ ಸಂತಸಗೊಂಡಿದ್ದೇನೆ ಮತ್ತು ಶನಿವಾರದಂದು ಘೋಷಿಸಲಾದ ಸುಂಕಗಳನ್ನು 30 ದಿನಗಳ ಅವಧಿವರೆಗೂ ತಡೆ ಹಿಡಿಯಲಾಗಿದೆ ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕೆನಡಾದ ಪಿಎಂ ಟ್ರುಡೊ ಎಕ್ಸ್ ಪೋಸ್ಟ್‌ನಲ್ಲಿ ಯೋಜನೆಯ ವಿವರಗಳನ್ನು ದೃಢಪಡಿಸಿದ್ದಾರೆ "ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದೇನೆ. ಕೆನಡಾ 1.3 ಬಿಲಿಯನ್ ಡಾಲರ್ ಗಡಿ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಹೊಸ ಚಾಪರ್‌ಗಳು, ತಂತ್ರಜ್ಞಾನ ಮತ್ತು ಸಿಬ್ಬಂದಿಗಳೊಂದಿಗೆ ಗಡಿ ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ.
ಇದಲ್ಲದೆ, ಕೆನಡಾ ಫೆಂಟಾನಿಲ್ ಝಾರ್ ತಡೆಗೆ ಕ್ರಮ ಕೈಗೊಳ್ಳುತ್ತೇವೆ. ನಾವು ಕಾರ್ಟೆಲ್‌ಗಳನ್ನು ಪಟ್ಟಿ ಮಾಡುತ್ತೇವೆ. ಗಡಿಯಲ್ಲಿ 24/7 ಹದ್ದಿನ ಕಣ್ಣಿಡುತ್ತೇವೆ. ಸಂಘಟಿತ ಅಪರಾಧ, ಫೆಂಟನಿಲ್ ಮತ್ತು ಮನಿ ಲಾಂಡರಿಂಗ್ ಅನ್ನು ಎದುರಿಸಲು ಕೆನಡಾ-ಯುಎಸ್ ಜಂಟಿ ಸ್ಟ್ರೈಕ್ ಫೋರ್ಸ್ ಪ್ರಾರಂಭಿಸುತ್ತೇವೆ. ನಾನು ಸಂಘಟಿತ ಅಪರಾಧ ಮತ್ತು ಫೆಂಟನಿಲ್ ಕುರಿತು ಹೊಸ ಗುಪ್ತಚರ ನಿರ್ದೇಶನಕ್ಕೆ ಸಹಿ ಹಾಕಿದ್ದೇವೆ ಎಂದು ಟ್ರೂಡೊ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.