Wildfire: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೆಟ್ಟ ಹವಾಮಾನದಿಂದಾಗಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಿದೆ. ಮಾಲಿಬುವಿ ಎಂಬಲ್ಲಿನ ಉತ್ತರದ ಬೆಟ್ಟಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿರುವ ಮನೆಗಳಿಗೆ ವಿನಾಶದ ಬೆದರಿಕೆ ಉಂಟಾಗಿದೆ. ಪಾಲಿಸೇಡ್ಸ್ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಬೀಸುತ್ತಿರುವ ಬಲವಾದ ಗಾಳಿ ನಿಲ್ಲದೇ ಇದ್ದರೆ ಕಾಡ್ಗಿಚ್ಚು ಇನ್ನಷ್ಟು ಅಪಾಯಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
70 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ:ತುರ್ತು ರಕ್ಷಣಾ ಸಿಬ್ಬಂದಿ ಕಾಡ್ಗಿಚ್ಚುಬಾಧಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದ 70 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಸಾವಿರಾರು ಕಟ್ಟಡಗಳು ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿವೆ. ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ಈಗಾಗಲೇ ಕಾಡ್ಗಿಚ್ಚುಪೀಡಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಸ್ಟ್ರೈಕ್ ಟೀಂಗಳನ್ನು ನಿಯೋಜಿಸಿದೆ. ಅಗ್ನಿಶಾಮಕ ದಳದ ನಿರಂತರವಾಗಿ ಬೆಂಕಿ ನಂದಿಸುವಲ್ಲಿ ಸಕ್ರಿಯವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕಾಡ್ಗಿಚ್ಚಿಗೆ ಕಾರಣವೇನು?:ಕಡಿಮೆ ಆರ್ದ್ರತೆ ಮತ್ತು ನಿರಂತರ ಬರ ಪರಿಸ್ಥಿತಿಗಳು ಪಾಲಿಸೇಡ್ಸ್ ಕಾಡ್ಗಿಚ್ಚಿಗೆ ಕಾರಣವೆಂದು ಹೇಳಲಾಗುತ್ತಿದೆ. ಬಲವಾಗಿ ಬೀಸುವ ಸಾಂತಾ ಅನಾ ಗಾಳಿ ಬೆಂಕಿ ವೇಗವಾಗಿ ವ್ಯಾಪಿಸಲು ಕಾರಣವಾಗುತ್ತಿದೆ. ಸದ್ಯ ಗಾಳಿಯ ವೇಗ ಗಂಟೆಗೆ 80 ಮೈಲುಗಳಷ್ಟಿದೆ. ವರದಿಗಳ ಪ್ರಕಾರ, ಪಾಲಿಸೇಡ್ಸ್ ಕಾಡ್ಗಿಚ್ಚು ಮಂಗಳವಾರ ಬೆಳಿಗ್ಗೆ 10:30ರ ಸುಮಾರಿಗೆ ನಾರ್ತ್ ಪಿಯೆಡ್ರಾ ಮೊರಾಡಾ ಡ್ರೈವ್‌ನಲ್ಲಿ ಮೊದಲು ವರದಿಯಾಗಿತ್ತು. ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆಯ ಪ್ರಕಾರ, ಮಧ್ಯಾಹ್ನದ ವೇಳೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಬೆಂಕಿ 200 ಎಕರೆಗೂ ಹೆಚ್ಚು ಪ್ರದೇಶಕ್ಕೆ ಹರಡಿದೆ.
ಸಮರೋಪಾದಿಯಲ್ಲಿ ಸ್ಥಳಾಂತರ ಕಾರ್ಯ: ಜನರನ್ನು ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಬೀದಿಗಳಲ್ಲಿ ಆಸ್ಪತ್ರೆಯ ಹಾಸಿಗೆಗಳು, ವೀಲ್‌ಚೇರ್‌ಗಳು ಮತ್ತು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಇರುವ ವಿಡಿಯೋ ವೈರಲ್ ಆಗುತ್ತಿದೆ.