ಢಾಕಾ (ಬಾಂಗ್ಲಾದೇಶ):ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಳು ಅಂತಸ್ತಿನ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ 75 ಜನರನ್ನು ರಕ್ಷಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ.
ಢಾಕಾ ಬೈಲಿ ರಸ್ತೆಯಲ್ಲಿರುವ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಗುರುವಾರ ರಾತ್ರಿ 9.50 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಹಂತ-ಹಂತವಾಗಿ ಮೇಲಿನ ಮಹಡಿಗಳಿಗೂ ಆವರಿಸಿದೆ. ಎರಡು ಗಂಟೆಯೊಳಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಘಟನೆ ನಡೆದ ಪ್ರದೇಶದಲ್ಲಿ ಅನೇಕ ಹೋಟೆಲ್ಗಳು, ಬಟ್ಟೆ ಅಂಗಡಿಗಳು ಮತ್ತು ಮೊಬೈಲ್ ಫೋನ್ ಮಾರಾಟ ಅಂಗಡಿಗಳಿವೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 42 ಮಂದಿ ಸೇರಿದಂತೆ 75 ಮಂದಿಯನ್ನು ಏಳು ಅಂತಸ್ತಿನ ಕಟ್ಟಡದಿಂದ ಹೊರ ತೆಗೆಯಲಾಗಿದೆ. 13 ಅಗ್ನಿಶಾಮಕ ಘಟಕಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮೊಹಮ್ಮದ್ ಶಿಹಾಬ್ ತಿಳಿಸಿದ್ದಾರೆ.
ಆರೋಗ್ಯ ಸಚಿವ ಡಾ.ಸಮಂತ ಲಾಲ್ ಸೇನ್ ಹೇಳಿಕೆ:ಬಾಂಗ್ಲಾದೇಶದ ರಾಜಧಾನಿಯ ಮಧ್ಯ ಭಾಗದಲ್ಲಿರುವ ಏಳು ಅಂತಸ್ತಿನ ಕಟ್ಟಡದಲ್ಲಿ ರಾತ್ರಿಯಿಡೀ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ 43 ಜನರು ಸಾವನ್ನಪ್ಪಿದ್ದಾರೆ. ಮತ್ತು 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸಮಂತ ಲಾಲ್ ಸೇನ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
"ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (DMCH) 33 ಜನರು ಮತ್ತು (ಸಮೀಪದ) ಶೇಖ್ ಹಸೀನಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬರ್ನ್ ಮತ್ತು ಪ್ಲಾಸ್ಟಿಕ್ ಸರ್ಜರಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಎರಡೂ ಆರೋಗ್ಯ ಕೇಂದ್ರಗಳಲ್ಲಿ 22 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಅವರ ಸ್ಥಿತಿಯು ಚಿಂತಾಜನಕವಾಗಿದೆ. ಬದುಕುಳಿದವರ ಉಸಿರಾಟದ ಸಮಸ್ಯೆಯಿಂದ ಬಳುತ್ತಿದ್ದಾರೆ'' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.