ಢಾಕಾ, ಬಾಂಗ್ಲಾದೇಶ: 2021ರಲ್ಲಿ ನೆರೆಯ ಬಾಂಗ್ಲಾದೇಶದಲ್ಲಿನ ಸತ್ಖೀರದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದರು. ಈ ವೇಳೆ ದೇವಿಗೆ ಕಾಣಿಕೆಯಾಗಿ ನೀಡಿದ್ದ ಕಿರೀಟವೇ ಇದೀಗ ಕಳ್ಳತನವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಎಂದಿನಂತೆ ಪೂರ್ಜಾ ಕಾರ್ಯ ನಡೆಸಿ, ಅರ್ಚಕರು ತೆರಳಿದ್ದಾರೆ. ಇದಾದ ಬಳಿಕ ದುಷ್ಕರ್ಮಿಗಳು ಮಧ್ಯಾಹ್ನ 2.00 ರಿಂದ 2.30ರ ನಡುವೆ ಈ ಕಿರೀಟ ಕಳ್ಳತನ ಮಾಡಿದ್ದಾರೆ. ದೇಗುಲದ ಸ್ವಚ್ಛತಾ ಸಿಬ್ಬಂದಿ ದೇವಿಯ ಕಿರೀಟ ಕಾಣೆಯಾಗಿರುವುದನ್ನು ಮೊದಲು ಪತ್ತೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಈ ಕುರಿತು ಮಾತನಾಡಿರುವ ಇನ್ಸ್ಪೆಕ್ಟರ್ ತೈಜುಲ್ ಇಸ್ಲಾಮ್, ದೇಗುಲದ ಸಿಸಿಟಿವಿ ಫೂಟೇಜ್ ತರಸಿಕೊಂಡು ಕಳ್ಳರ ಪತ್ತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳುವಾಗಿರುವ ಕೀರಿಟವನ್ನು ಬೆಳ್ಳಿ ಮತ್ತು ಬಂಗಾರದಿಂದ ಮಾಡಲಾಗಿದ್ದು, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಪ್ರತೀಕವಾಗಿ ಇದನ್ನು ಸಮರ್ಪಣೆ ಮಾಡಲಾಗಿತ್ತು.
ಜೆಶೋರೇಶ್ವರಿ ಎಂದರೆ ಯಾರು?:ಹಿಂದೂ ಪುರಾಣದ ಪ್ರಕಾರ, ಜೆಶೋರೇಶ್ವರಿ ದೇಗುಲವೂ ದೇವಿಯ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಜೆಶೋರೇಶ್ವರಿ ಎಂದರೆ ಜೆಶೋರ್ ದೇವತೆ ಎಂಬುದಾಗಿದೆ. 2021ರಲ್ಲಿ ಬಾಂಗ್ಲಾದೇಶ ಪ್ರವಾಸ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 27ರಂದು ಈ ದೇಗುಲಕ್ಕೆ ಭೇಟಿ ನೀಡಿದ್ದರು.