ಕರಾಚಿ (ಪಾಕಿಸ್ತಾನ): ಬಲೂಚಿಸ್ತಾನದಲ್ಲಿ ಯಾವುದೇ ಸಾರ್ವಜನಿಕ ಸಭೆಗಳು ಮತ್ತು ಚುನಾವಣಾ ಸಭೆಗಳನ್ನು ನಡೆಸದಂತೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಮಹಿಳಾ ಬಾಂಬರ್ನಿಂದ ಆತ್ಮಹತ್ಯಾ ದಾಳಿ ನಡೆಯಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆಗಳು ನಡೆಯುವ ಮುನ್ನ ಈ ನಿರ್ಬಂಧ ವಿಧಿಸಿದ್ದು ಗಮನಾರ್ಹವಾಗಿದೆ.
ಬಲೂಚಿಸ್ತಾನದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಜಾನ್ ಅಚಕ್ಜಾಯ್ ಭಾನುವಾರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಸಂಭಾವ್ಯ ಅಪಾಯ ತಡೆಗಟ್ಟಲು ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮನೆಗಳಲ್ಲಿಯೇ ತಮ್ಮ ಸಭೆಗಳನ್ನು ನಡೆಸಬೇಕೆಂದು ತಿಳಿಸಿದ್ದಾರೆ.
ಸದ್ಯ ಪ್ರಕ್ಷುಬ್ಧ ಸ್ಥಿತಿಯಲ್ಲಿರುವ ಬಲೂಚಿಸ್ತಾನದಲ್ಲಿ ಗುರುವಾರ ಒಂದೇ ದಿನ 10 ಬಾಂಬ್ ಸ್ಪೋಟದ ಘಟನೆಗಳು ನಡೆದಿವೆ. ಕ್ವೆಟ್ಟಾದ ಗುಡ್ಡಗಾಡು ಪ್ರದೇಶದಲ್ಲಿನ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ರಸ್ತೆಯ ಫುಟ್ಪಾತ್ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟದಲ್ಲಿ 84 ವರ್ಷದ ವೃದ್ಧ ಮೃತಪಟ್ಟಿರುವುದಾಗಿ ಕ್ವೆಟ್ಟಾ ಎಸ್ಎಸ್ಪಿ (ಕಾರ್ಯಾಚರಣೆ) ಜವಾದ್ ತಾರಿಕ್ ತಿಳಿಸಿದ್ದಾರೆ. ಸುಧಾರಿತ ಸ್ಫೋಟಕ ಸಾಧನದಲ್ಲಿ ಸುಮಾರು ಎಂಟು ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ತಾರಿಕ್ ಹೇಳಿದರು.