ಅಬುಧಾಬಿ(ಯುಎಇ): ಸುಡಾನ್ ರಾಜಧಾನಿ ಖಾರ್ಟೂಮ್ನಲ್ಲಿನ ಯುಎಇ ರಾಯಭಾರಿಯ ನಿವಾಸದ ಮೇಲೆ ಸುಡಾನ್ ಸೇನೆ ದಾಳಿ ನಡೆಸಿದ್ದು, ರಾಯಭಾರಿಯ ನಿವಾಸ ಮತ್ತು ಸುತ್ತಮುತ್ತಲಿನ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಯುಎಇಯ ಭದ್ರತಾ ಮತ್ತು ಮಿಲಿಟರಿ ವ್ಯವಹಾರಗಳ ಸಹಾಯಕ ಸಚಿವ ಸಲೇಂ ಅಲ್ ಜಬೇರಿ ಹೇಳಿದ್ದಾರೆ.
ಈ ದಾಳಿಯು ಅಂತಾರಾಷ್ಟ್ರೀಯ ಸಂಪ್ರದಾಯ ಮತ್ತು ಮಾನದಂಡಗಳು, ವಿಶೇಷವಾಗಿ ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಸಮಾವೇಶ ಒಪ್ಪಂದದ ನಿಯಮಗಳ ಉಲ್ಲಂಘನೆ ಮಾತ್ರವಲ್ಲದೆ, ರಾಜತಾಂತ್ರಿಕ ಆವರಣದ ಮೇಲೆ ದಾಳಿ ನಡೆಸಿರುವುದು ಮೂಲಭೂತ ತತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಯುಎಇ ಹೇಳಿದೆ.
ರಾಯಭಾರಿಯ ನಿವಾಸದ ಮೇಲೆ ದಾಳಿ ಮಾಡಿರುವುದನ್ನು ಸ್ಪಷ್ಟವಾಗಿ ತೋರಿಸುವ ಚಿತ್ರಗಳು ಮತ್ತು ಪುರಾವೆಗಳು ಲಭ್ಯವಿವೆ ಎಂದು ಒತ್ತಿ ಹೇಳಿದ ಸಚಿವ ಸಲೇಂ ಅಲ್ ಜಬೇರಿ, ಸುಡಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅದರ ಸಶಸ್ತ್ರ ಪಡೆಗಳು ಈ ವಿಷಯದಲ್ಲಿ ಸುಳ್ಳು ಹೇಳುತ್ತಿವೆ ಎಂದು ಪ್ರತಿಪಾದಿಸಿದರು.
ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿತಪ್ಪಿಸುವ ಮೂಲಕ ಮತ್ತು ಸುಡಾನ್ ಜನತೆ ಅನುಭವಿಸುತ್ತಿರುವ ಸಂಕಷ್ಟದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಮೂಲಕ, ಸುಡಾನ್ನಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗಿರುವ ಮಾನವೀಯ ವಿಪತ್ತಿನ ಕಾನೂನು ಮತ್ತು ನೈತಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸುಡಾನ್ ಸಶಸ್ತ್ರ ಪಡೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.