ಸನಾ (ಯಮನ್):ಯಮನ್ ದೇಶಕ್ಕೆ ಹೊಸ ಪ್ರಧಾನಿ ನೇಮಕ ಮಾಡಲಾಗಿದೆ. ಯಮನ್ನ ವಿದೇಶಾಂಗ ಸಚಿವರಾಗಿದ್ದ ಅಹ್ಮದ್ ಅವದ್ ಬಿನ್ ಮುಬಾರಕ್ ಅವರನ್ನು ದೇಶದ ಹೊಸ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಈ ಮೊದಲು ಮೈನ್ ಅಬ್ದುಲ್ಮಲಿಕ್ ಸಯೀದ್ ಪ್ರಧಾನಿಯಾಗಿದ್ದರು.
ಹೌತಿ ಬಂಡುಕೋರರ ಅತಿಯಾದ ದಾಳಿಯಿಂದ ಕಂಗೆಟ್ಟಿರುವ ದೇಶ ಸಂದಿಗ್ನ ಪರಿಸ್ಥಿತಿಯಲ್ಲಿದ್ದು, ಅಹ್ಮದ್ ಅವದ್ ಬಿನ್ ಮುಬಾರಕ್ ಅವರಿಗೆ ನೂತನ ಪ್ರಧಾನಿಯ ಸ್ಥಾನ ನೀಡಲಾಗಿದೆ. ಈಗಾಗಲೇ ಕೆಂಪು ಸಮುದ್ರದಲ್ಲಿಂದ ಹೌತಿ ಬಂಡುಕೋರರ ನಿರಂತರ ದಾಳಿಯಿಂದಾಗಿ ಅರೇಬಿಯನ್ ಪೆನಿನ್ಸುಲಾದ ರಾಷ್ಟ್ರವಾಗಿರುವ ಯಮನ್ ಹೆಚ್ಚಿನ ಭೀತಿ ಹಾಗೂ ಉದ್ವಿಗ್ನತೆಯನ್ನು ಅನುಭವಿಸುತ್ತಿದೆ.
ಅಹ್ಮದ್ ಅವದ್ ಬಿನ್ ಮುಬಾರಕ್ ಪ್ರಧಾನಿ ಬೆನ್ನಲ್ಲೆ ಮಾಜಿ ಪ್ರಧಾನಿ ಮೈನ್ ಅಬ್ದುಲ್ಮಲಿಕ್ ಸಯೀದ್ ಅವರಿಗೆ ಅಧ್ಯಕ್ಷೀಯ ಸಲಹೆಗಾರ ಸ್ಥಾನವನ್ನು ದೇಶದ ಅಧ್ಯಕ್ಷೀಯ ನಾಯಕತ್ವ ಮಂಡಳಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ದೇಶದ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಯಾಕಾಗಿ ಅಧ್ಯಕ್ಷೀಯ ನಾಯಕತ್ವ ಮಂಡಳಿ ಈ ನಿರ್ಧಾರ ತಗೆದುಕೊಂಡಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಲಭಿಸಿಲ್ಲ.
ಹೌತಿಗಳಿಂದ ಅಪಹರಿಸಲ್ಪಟ್ಟಿದ್ದ ಬಿನ್ ಮುಬಾರಕ್ :ಅಮೆರಿಕ ರಾಷ್ಟ್ರಕ್ಕೆ ಯಮನ್ನ ರಾಯಭಾರಿಯಾಗಿದ್ದ ಅಹ್ಮದ್ ಅವದ್ ಬಿನ್ ಮುಬಾರಕ್ ಹೌತಿ ಬಂಡುಕೋರರ ಬದ್ಧ ವೈರಿಯಾಗಿದ್ದು, ದೇಶವಲ್ಲದೇ ಹೊರಗೂ ಗಮನ ಸೆಳೆದಿದ್ದಾರೆ. 2015 ರಲ್ಲಿ ಆಗಿನ ಅಧ್ಯಕ್ಷ ಅಬ್ದ್-ರಬ್ಬು ಮನ್ಸೂರ್ ಹಾಡಿ ಅವರೊಂದಿಗೆ ಅಧಿಕಾರದ ಹೋರಾಟ ನಡೆಸುತ್ತಿದ್ದು, ಆಗ ಅವರು ಯಮನ್ನ ಅಧ್ಯಕ್ಷೀಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಆ ಸಂದರ್ಭ ಹೌತಿಗಳು ಅವರನ್ನುಅಪಹರಿಸಲ್ಪಟ್ಟಾಗ ದೇಶದಲ್ಲೇ ಪ್ರಾಮುಖ್ಯತೆಗೆ ಬಂದರು. ಇವರನ್ನು ಹೌತಿಗಳಿಂದ ವಾಪಸ್ ಕರೆ ತರುವ ವೇಳೆ ದೇಶದಲ್ಲಿ ರಾಜಕೀಯ ಅಶಾಂತಿಗೆ ಕಾರಣವಾಗಿತ್ತು. ಅಲ್ಲದೇ ಹೌತಿ ಮತ್ತು ಅಬ್ದ್-ರಬ್ಬು ಮನ್ಸೂರ್ ಹಾಡಿಯ ಅಧ್ಯಕ್ಷೀಯ ಗಾರ್ಡ್‌ಗಳ ನಡುವಣ ಹಗೆತನಕ್ಕೂ ಈ ಘಟನೆ ಕಾರಣವಾಗಿತ್ತು. ಇದೇ ವಿಚಾರ ಅಂದು ಅಧ್ಯಕ್ಷರ ರಾಜೀನಾಮೆಗೆ ಕಾರಣವಾಗಿತ್ತು.
ಇನ್ನು 2018 ರಲ್ಲಿ, ಬಿನ್ ಮುಬಾರಕ್ ಅವರನ್ನು ವಿಶ್ವಸಂಸ್ಥೆಗೆ ಯಮನ್ ದೇಶದ ಪ್ರತಿನಿಧಿಯಾಗಿ ನೇಮಕ ಮಾಡಲಾಗಿತ್ತು. ಇರಾನ್ನ ಸಂಯೋಜಿತ ಗುಂಪಾಗಿರುವ ಹೌತಿ ಬಂಡುಕೋರರು ಇಸ್ರೇಲ್‌ನ ಗಾಜಾ ಸಂಘರ್ಷಕ್ಕೆ ಪ್ರತೀಕಾರವಾಗಿ ದಾಳಿಗಳನ್ನು ಆರಂಭಿಸಿದ್ದಾರೆ. ಇಸ್ರೇಲ್ ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವವರೆಗೂ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಹೌತಿಗಳು ಎಚ್ಚರಿಸಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ನೂತನ ಪ್ರಧಾನಿ ಎದುರಿಸಿ, ರಾಷ್ಟ್ರವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ.
ಇದನ್ನೂ ಓದಿ :ಫೆಬ್ರವರಿ 14ಕ್ಕೆ ಯುಎಇಯಲ್ಲಿ ಹಿಂದೂ ದೇವಾಲಯ ಉದ್ಘಾಟನೆ: ಅಬುಧಾಬಿ ತಲುಪಿದ ಮಹಂತ್ ಸ್ವಾಮಿ ಮಹಾರಾಜ್