ದುಬೈ: ಅಬುಧಾಬಿಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಬಿಎಪಿಎಸ್ ಹಿಂದೂ ದೇವಸ್ಥಾನವು ಮಾರ್ಚ್ 1ರಿಂದ ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಳ್ಳಲಿದೆ. ಈ ಶುಭ ಸಂದರ್ಭದ ಅಂಗವಾಗಿ ನಡೆದ ಹಿಂದೂ ಸಮುದಾಯದ ಸದಸ್ಯರ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾಂಪ್ರದಾಯಿಕ ಭಾರತೀಯ ಉಡುಪನ್ನು ಧರಿಸಿದ್ದ 1100ಕ್ಕೂ ಹೆಚ್ಚು ಭಾರತೀಯ ಮೂಲದ ಭಕ್ತರು ಭಕ್ತಿಗೀತೆ ಹಾಡುತ್ತ, ನೃತ್ಯ ಮಾಡುತ್ತ ಪಲ್ಲಕ್ಕಿ ಯಾತ್ರೆ ಯಲ್ಲಿ ಭಾಗವಹಿಸಿದ್ದರು ಎಂದು ಖಲೀಜ್ ಟೈಮ್ಸ್ ಪತ್ರಿಕೆ ಬುಧವಾರ ವರದಿ ಮಾಡಿದೆ.
'ಸಾಮರಸ್ಯದ ಹಬ್ಬ'ದ ಅಂಗವಾಗಿ ಭಾನುವಾರ ನಡೆದ ಮೆರವಣಿಗೆಯಲ್ಲಿ ದೇವಾಲಯದ ಏಳು ಪ್ರಮುಖ ದೇವಸ್ಥಾನಗಳ ವಿಗ್ರಹಗಳನ್ನು ಅಲಂಕೃತ ಪಲ್ಲಕ್ಕಿಗಳಲ್ಲಿ ಇರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ನಂತರ ಬಿಎಪಿಎಸ್ ಹಿಂದೂ ಮಂದಿರದ ಯೋಜನಾ ಮುಖ್ಯಸ್ಥ ಬ್ರಹ್ಮವಿಹಾರಿದಾಸ್ ಸ್ವಾಮಿ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಿದರು.
"ಮಂದಿರದ ಸುತ್ತಲೂ ಪ್ರದಕ್ಷಿಣೆ ಹಾಕುತ್ತ ನೃತ್ಯ ಮಾಡುತ್ತಿದ್ದ ಇಷ್ಟೊಂದು ಭಕ್ತಾದಿಗಳ ಭಕ್ತಿ, ಸಂತೋಷಗಳನ್ನು ನಾನು ಹಿಂದೆಂದೂ ನೋಡಿಲ್ಲ. ನಮ್ಮೆಲ್ಲರಿಗಾಗಿ ಇಲ್ಲಿಗೆ ಮುಕ್ತ ಅವಕಾಶ ನೀಡಿದ್ದಕ್ಕಾಗಿ ಮತ್ತು ಎಲ್ಲರಿಗೂ ಸ್ವಾಗತ ನೀಡಿದ್ದಕ್ಕಾಗಿ ನಾವು ಬಿಎಪಿಎಸ್ ಮಂದಿರಕ್ಕೆ ಧನ್ಯವಾದ ಅರ್ಪಿಸುತ್ತೇವೆ. ಇದು ನಮ್ಮದೇ ದೇವಸ್ಥಾನ ಎಂಬ ಭಾವ ನಮ್ಮದಾಗಿದೆ. ಇದೆಲ್ಲದಕ್ಕಾಗಿ ಗುರು ಮಹಂತ್ ಸ್ವಾಮಿ ಮಹಾರಾಜ್ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ" ಎಂದು ಸಮುದಾಯದ ಸದಸ್ಯೆ ಲೀನಾ ಬರೋಟ್ ಖಲೀಜ್ ಟೈಮ್ಸ್ ಗೆ ತಿಳಿಸಿದರು.