ನವದೆಹಲಿ: ಈ ವರ್ಷ ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆ ತೆರಳಿದ ಭಾರತೀಯರಲ್ಲಿ 98 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಸಾವನ್ನಪ್ಪಿದವರ ಸಂಖ್ಯೆ 187 ಆಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ತಿಳಿಸಿದ್ದಾರೆ
ಈ ವರ್ಷ 1,75,000 ಯಾತ್ರಾರ್ಥಿಗಳು ಮೆಕ್ಕಾಗೆ ಭೇಟಿ ನೀಡಿದ್ದು, ಈ ಹಜ್ ಯಾತ್ರೆ ಮೇ 9ರಿಂದ ಜುಲೈ 22ರವರೆಗೆ ಸಾಗಲಿದೆ. ಇಲ್ಲಿಯವರೆಗೆ 98 ಭಾರತೀಯರ ಸಾವಿನ ವರದಿಯಾಗಿದೆ. ಬಹುತೇಕ ನೈಸರ್ಗಿಕ ಕಾರಣ, ದೀರ್ಘ ಅನಾರೋಗ್ಯ ಮತ್ತು ವೃದ್ಧಾಪ್ಯದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು ಇಲಾಖೆ ತಿಳಿಸಿದೆ. ಆರಾಫತ್ ದಿನ ಆರು ಮಂದಿ ಸಾವನ್ನಪ್ಪಿದ್ದು, ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತೀಯರ ಚಿಕಿತ್ಸೆಗೆ 365 ವೈದ್ಯರು: ಸೌದಿ ಅರೇಬಿಯಾದಲ್ಲಿ ಹೆಚ್ಚಿದ ತಾಪಮಾನದಿಂದ ಜನರು ಬಳಲುತ್ತಿರುವ ಹಿನ್ನೆಲೆಯಲ್ಲಿ ಹಜ್ ಯಾತ್ರಿಕರ ವೈದ್ಯಕೀಯ ಆರೈಕೆಗಾಗಿ ಭಾರತದ 365 ವೈದ್ಯರು ಮತ್ತು ಅರೆವೈದ್ಯರನ್ನು ನಿಯೋಜಿಸಲಾಗಿದೆ. ವಿಪರೀತ ಹವಾಮಾನ ವೈಪರೀತ್ಯದ ನಡುವೆಯೇ 2 ಲಕ್ಷ ಒಪಿಡಿಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಭಾರತದಿಂದ ಈ ವರ್ಷ 1.75 ಲಕ್ಷಕ್ಕೂ ಹೆಚ್ಚಿನ ಯಾತ್ರಿಕರು ಹಜ್ ಯಾತ್ರೆ ಕೈಗೊಂಡಿದ್ದು, ಅದರಲ್ಲಿ ಸುಮಾರು 40,000 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.