ಪ್ಯಾರಿಸ್/ಲಂಡನ್: ಬ್ರಿಟನ್ ಸರ್ಕಾರವು ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದವರನ್ನು ರುವಾಂಡಾಗೆ ಗಡಿಪಾರು ಮಾಡುವ ಮಸೂದೆ ಅಂಗೀಕರಿಸಿದೆ. ಇದರ ಬೆನ್ನಲ್ಲೇ ಫ್ರಾನ್ಸ್‌ನಿಂದ ಬ್ರಿಟನ್‌ಗೆ ಇಂಗ್ಲಿಷ್ ಕಾಲುವೆಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಫ್ರೆಂಚ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪಾಸ್-ಡಿ-ಕಲೈಸ್ ಕರಾವಳಿ ಮೂಲಕ ಫ್ರಾನ್ಸ್‌ನಿಂದ ಬ್ರಿಟನ್‌ಗೆ ಬೆಳಗ್ಗೆ ವಲಸಿಗರಿಂದ ತುಂಬಿದ ಹಲವಾರು ದೋಣಿಗಳು ಹೊರಡಲು ಪ್ರಯತ್ನಿಸಿದ್ದವು. ವಿಮೆರೆಕ್ಸ್‌ನ ಕಡಲತೀರದಿಂದ 112 ಜನರನ್ನು ಹೊಂದಿದ್ದ ದೋಣಿ ಹೊರಡುತ್ತಿದ್ದಾಗ ನೆರವು ಮತ್ತು ಪಾರುಗಾಣಿಕಾ ಹಡಗು ಅಬೈಲ್ ನಾರ್ಮಂಡಿ ಸೇರಿದಂತೆ ಫ್ರೆಂಚ್ ನೌಕಾಪಡೆಯ ಹಲವು ಹಡಗುಗಳು ರಕ್ಷಿಸಲು ಮುಂದಾಗಿದ್ದವು. ಈ ವೇಳೆ, ಹಲವಾರು ಜನರ ರಕ್ಷಣೆ ಮಾಡಲಾಯಿತು. ಆದರೆ, ದುರದೃಷ್ಟವಶಾತ್ 7 ವರ್ಷದ ಬಾಲಕಿ, ಓರ್ವ ಮಹಿಳೆ ಮತ್ತು ಮೂವರು ಪುರುಷರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಆಡಳಿತಾಧಿಕಾರಿ ಜಾಕ್ವೆಸ್ ಬಿಲ್ಲಂಟ್ ತಿಳಿಸಿದ್ದಾರೆ.
ಉತ್ತರ ಫ್ರಾನ್ಸ್‌ನ ವಿಮೆರೆಕ್ಸ್ ಬೀಚ್‌ನಲ್ಲಿ ಮೃತದೇಹಗಳು ಪತ್ತೆಯಾಗಿವೆ. ಸುಮಾರು 100 ವಲಸಿಗರನ್ನು ರಕ್ಷಿಸಲಾಗಿದೆ. ಫ್ರೆಂಚ್ ನೌಕಾಪಡೆಯ ಹಡಗಿನಲ್ಲಿ ಅವರನ್ನು ಬೌಲೋನ್ ಬಂದರಿಗೆ ಕರೆದೊಯ್ಯಲಾಗುವುದು. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇದಕ್ಕಾಗಿ ಹೆಲಿಕಾಪ್ಟರ್‌ಗಳು ಮತ್ತು ದೋಣಿಗಳನ್ನು ಇನ್ನೂ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ಏನಿದು ಬ್ರಿಟನ್ ವಲಸೆ ಕಾನೂನು?:ಕೆಲವು ವಲಸಿಗರನ್ನು ರುವಾಂಡಾಕ್ಕೆ ಗಡಿಪಾರು ಮಾಡುವ ಕಾನೂನಿಗಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೆಲ ದಿನಗಳಿಂದ ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನದ ಫಲವಾಗಿ ಅಂತಿಮವಾಗಿ ಸಂಸತ್ತಿನಲ್ಲಿ ಮಂಗಳವಾರ ವಲಸೆ ಮಸೂದೆಗೆ ಅನುಮೋದನೆ ಸಿಕ್ಕಿದೆ. ಬ್ರಿಟನ್‌ಗೆ ತಲುಪಿದ ನಂತರ ಆಶ್ರಯ ಪಡೆಯಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸದಲ್ಲಿ ಕಿಕ್ಕಿರಿದ ದೋಣಿಗಳಲ್ಲಿ ತಮ್ಮ ಪ್ರಾಣವನ್ನು ಅಪಾಯಕ್ಕೊಡ್ಡುತ್ತಿದ್ದ ವಲಸಿಗರನ್ನು ತಡೆಗಟ್ಟಲು ಮತ್ತು ಅಕ್ರಮವಾಗಿ ದೇಶಕ್ಕೆ ಪ್ರವೇಶಿಸುವ ಕೆಲವರನ್ನು ಗಡಿಪಾರು ಮಾಡಲು ಬ್ರಿಟನ್ ಸರ್ಕಾರ ಈ ಕಾನೂನು ತಂದಿದೆ.
ಇದರ ಕೆಲವು ಗಂಟೆಗಳಲ್ಲೇ ಈ ಐವರು ವಲಸಿಗರ ಸಾವಿನ ಘಟನೆ ಸಂಭವಿಸಿದೆ. ಮತ್ತೊಂದೆಡೆ, ಸುನಾಕ್ ಸರ್ಕಾರದ ರೂಪಿಸಿದ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು ಅಮಾನವೀಯ ಮತ್ತು ಕ್ರೂರ ಎಂದು ಟೀಕಿಸಿವೆ. ಜಾಗತಿಕ ವಲಸಿಗರ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕೆ ಹಾನಿಗೊಳಿಸಬಹುದೇ ಎಂಬ ಬಗ್ಗೆ ಮರುಪರಿಶೀಲಿಸುವಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ ಮತ್ತು ಕೌನ್ಸಿಲ್ ಆಫ್ ಯುರೋಪ್ ಸಹ ಬ್ರಿಟನ್‌ಗೆ ಕರೆ ನೀಡಿದೆ.
ಇಂಗ್ಲಿಷ್ ಕಾಲುವೆ:ಅಟ್ಲಾಂಟಿಕ್ ಸಾಗರದಲ್ಲಿ ದಕ್ಷಿಣ ಇಂಗ್ಲೆಂಡ್ ಮತ್ತು ಉತ್ತರ ಫ್ರಾನ್ಸ್ ಅನ್ನು ಇಂಗ್ಲಿಷ್ ಕಾಲುವೆ ಪ್ರತ್ಯೇಕಿಸುತ್ತದೆ. ಈ ಕಾಲುವೆ ದಾಟಲು ವಲಸಿಗರು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಆಗಾಗ್ಗೆ ಕಿಕ್ಕಿರಿದ ದೋಣಿಗಳ ಮುಳುಗುವಿಕೆ ಮತ್ತು ಇತರ ಘಟನೆಗಳಿಂದ ವಲಸಿಗರು ಮುಳುಗಿದ ದುರಂತ ನಡೆಯುತ್ತವೆ. ಬ್ರಿಟನ್ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2023ರಲ್ಲಿ ಅಂದಾಜು 30,000 ಜನ ಇಂಗ್ಲಿಷ್ ಕಾಲುವೆ ಮೂಲಕ ದಾಟಿದ್ದಾರೆ.
ಇದನ್ನೂ ಓದಿ:ಕಾಶ್ಮೀರ ವಿಷಯದಲ್ಲಿ ಇರಾನ್ ಬೆಂಬಲ ಪಡೆಯಲು ವಿಫಲ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ - KASHMIR ISSUE