ಮೈದುಗುರಿ (ನೈಜೀರಿಯಾ): ಈಶಾನ್ಯ ನೈಜೀರಿಯಾದಲ್ಲಿ ಬೊಕೊ ಹರಾಮ್ ಉಗ್ರಗಾಮಿಗಳು ಹಲವಾರು ತಿಂಗಳುಗಳಿಂದ ಒತ್ತೆಯಾಳಾಗಿ ಇರಿಸಿಕೊಂಡಿದ್ದ ನೂರಾರು ಮಹಿಳೆಯರು ಮತ್ತು ಮಕ್ಕಳನ್ನು ಅರಣ್ಯ ಪ್ರದೇಶವೊಂದರಿಂದ ರಕ್ಷಿಸಿ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಸೇನೆ ತಿಳಿಸಿದೆ.
2009 ರಲ್ಲಿ ಬಂಡಾಯ ಪ್ರಾರಂಭಿಸಿದ ಉಗ್ರಗಾಮಿ ಗುಂಪಿನ ಅಡಗುತಾಣವಾದ ಸಂಬಿಸಾ ಅರಣ್ಯದಲ್ಲಿ 350 ಒತ್ತೆಯಾಳುಗಳನ್ನು ಇರಿಸಲಾಗಿತ್ತು ಎಂದು ನೈಜೀರಿಯಾದ ಹಿರಿಯ ಸೇನಾಧಿಕಾರಿ ಮೇಜರ್ ಜನರಲ್ ಕೆನ್ ಚಿಗ್ಬು ಸೋಮವಾರ ಹೇಳಿದರು. ಸಂಬಿಸಾ ಅರಣ್ಯ ಇರುವ ಬೊರ್ನೊದಲ್ಲಿ ಒತ್ತೆಯಾಳುಗಳನ್ನು ಅಧಿಕಾರಿಗಳಿಗೆ ಒಪ್ಪಿಸುವ ಸಮಯದಲ್ಲಿ ಸೋಮವಾರ ತಡರಾತ್ರಿ ಕೆನ್ ಚಿಗ್ಬು ಮಾತನಾಡಿದರು.
ಹರಿದ ಕೊಳಕಾದ ಬಟ್ಟೆಗಳನ್ನು ತೊಟ್ಟಿದ್ದ 209 ಮಕ್ಕಳು, 135 ಮಹಿಳೆಯರು ಮತ್ತು ಆರು ಪುರುಷರು ತೀರಾ ದಯನೀಯ ಹಾಗೂ ಬಳಲಿದ ಸ್ಥಿತಿಯಲ್ಲಿ ಕಂಡು ಬಂದರು. ಉಗ್ರರ ವಶದಲ್ಲಿದ್ದ ಕೆಲ ಬಾಲಕಿಯರು ಬಲವಂತದ ಮದುವೆಗಳಿಂದ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಉಗ್ರರು ತಮ್ಮ ವಶದಲ್ಲಿರುವ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವುದು ಅಥವಾ ಅವರನ್ನು ಬಲವಂತವಾಗಿ ಮದುವೆಯಾಗುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ.
ಮಹಿಳಾ ಒತ್ತೆಯಾಳುಗಳ ಪೈಕಿ ಓರ್ವಳಿಗೆ ಏಳು ಮಕ್ಕಳಿರುವುದು ಕಂಡು ಬಂದಿತು. ಕೆಲವರು ಉಗ್ರರ ಹಿಡಿತದಿಂದ ತಪ್ಪಿಸಿಕೊಂಡರೂ ಮಕ್ಕಳ ಕಾರಣದಿಂದ ತನಗೆ ಹಾಗೆ ಮಾಡಲಾಗಲಿಲ್ಲ ಎಂದು ಏಳು ಮಕ್ಕಳೊಂದಿಗೆ ರಕ್ಷಿಸಲ್ಪಟ್ಟ ಮಹಿಳೆ ಹಜಾರಾ ಉಮರಾ ಹೇಳಿದರು. ತಪ್ಪಿಸಿಕೊಳ್ಳುವ ಸಮಯದಲ್ಲಿ ಸಿಕ್ಕಿಬಿದ್ದರೆ ಅಂಥವರನ್ನು ತೀವ್ರ ಹಿಂಸೆಗೆ ಒಳಪಡಿಸಲಾಗುತ್ತದೆ ಅಥವಾ ಅವರನ್ನು ಶಾಶ್ವತವಾಗಿ ಬಂಧಿಸಿ ಇಡಲಾಗುತ್ತದೆ.