ಕೈವ್:2024 ರಲ್ಲಿ ಥೈಲ್ಯಾಂಡ್ಗೆ 35.54 ಮಿಲಿಯನ್ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 26.27 ರಷ್ಟು ಹೆಚ್ಚಳವಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಕಳೆದ ವರ್ಷ ಚೀನಾದಿಂದ ಅತ್ಯಧಿಕ 6.73 ಮಿಲಿಯನ್ ಪ್ರವಾಸಿಗರು ಥೈಲ್ಯಾಂಡ್ಗೆ ಭೇಟಿ ನೀಡಿದ್ದಾರೆ. 4.95 ಮಿಲಿಯನ್ ಮತ್ತು 2.12 ಮಿಲಿಯನ್ ಪ್ರವಾಸಿಗರೊಂದಿಗೆ ಕ್ರಮವಾಗಿ ಮಲೇಷ್ಯಾ ಮತ್ತು ಭಾರತ ನಂತರದ ಸ್ಥಾನಗಳಲ್ಲಿವೆ ಎಂದು ಥಾಯ್ ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಥೈಲ್ಯಾಂಡ್ 2024 ರಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರಿಂದ ಸರಿಸುಮಾರು 1.67 ಟ್ರಿಲಿಯನ್ ಬಾಟ್ (ಸುಮಾರು 48.45 ಬಿಲಿಯನ್ ಡಾಲರ್) ಆದಾಯ ಗಳಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 34 ರಷ್ಟು ಹೆಚ್ಚಳವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಜನವರಿಯಿಂದ, ಥೈಲ್ಯಾಂಡ್ಗೆ ಭೇಟಿ ನೀಡುವ ಸಂದರ್ಶಕರು ವಿಶ್ವದಾದ್ಯಂತದ ಎಲ್ಲಾ ಥಾಯ್ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್ಗಳಲ್ಲಿ ಲಭ್ಯವಿರುವ ಆನ್ ಲೈನ್ ವ್ಯವಸ್ಥೆಯ ಮೂಲಕ ಎಲೆಕ್ಟ್ರಾನಿಕ್ ವೀಸಾಗೆ ಅರ್ಜಿ ಸಲ್ಲಿಸಬಹುದು. ಇದು ಸುವ್ಯವಸ್ಥಿತ ಅರ್ಜಿ ಪ್ರಕ್ರಿಯೆ ಮತ್ತು ಅನುಕೂಲಕರ ಆನ್ ಲೈನ್ ಪಾವತಿ ಆಯ್ಕೆಗಳನ್ನು ಖಚಿತಪಡಿಸುತ್ತದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.