ಪ್ಯೊಂಗ್ಯಾಂಗ್( ಉತ್ತರ ಕೊರಿಯಾ):ಪ್ರವಾಹ ಮತ್ತು ಭೂಕುಸಿತದ ಘಟನೆಗಳನ್ನು ತಡೆಗಟ್ಟುವಲ್ಲಿ ವಿಫಲರಾದ ಆರೋಪದ ಮೇಲೆ 30 ಅಧಿಕಾರಿಗಳನ್ನು ಗಲ್ಲಿಗೇರಿಸುವಂತೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ - ಉನ್ ಆದೇಶಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪದ ಮೇಲೆ ಸುಮಾರು 20 ರಿಂದ 30 ನಾಯಕರಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಉತ್ತರ ಕೊರಿಯಾದ ಅಧಿಕಾರಿಯನ್ನು ಉಲ್ಲೇಖಿಸಿ ಟಿವಿ ಚೋಸುನ್ ವರದಿ ಮಾಡಿದೆ.
ಈ ಹಿಂದೆ ಕಳೆದ ತಿಂಗಳ ಕೊನೆಯಲ್ಲಿ, ಪ್ರವಾಹ ಪೀಡಿತ ಪ್ರದೇಶದಲ್ಲಿ ಇದೇ ರೀತಿಯಾಗಿ ಸುಮಾರು 20 ರಿಂದ 30 ಕಾರ್ಯಕರ್ತರನ್ನು ಗಲ್ಲಿಗೇರಿಸಲಾಯಿತು ಎಂದು ಅಧಿಕಾರಿ ಟಿವಿ ಮಾಧ್ಯಮಕ್ಕೆ ಹೇಳಿದ್ದಾರೆ. ಈ ಹಿಂದೆ, ಪ್ರವಾಹ ಮತ್ತು ಭೂಕುಸಿತಗಳಿಂದ ಹೆಚ್ಚಿನ ಜನ ಸಾವಿಗೀಡಾಗಿ, ಸುಮಾರು 15,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದ ನಂತರ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಕಿಮ್ ಆದೇಶಿಸಿದ್ದರು ಎಂದು ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಉತ್ತರ ಕೊರಿಯಾದಲ್ಲಿ ಸಾರ್ವಜನಿಕ ಮರಣದಂಡನೆ ಶಿಕ್ಷೆಗಳು ಹೆಚ್ಚಾಗಿದೆ. ಕೊರೊನಾಗಿಂತ ಮೊದಲು, ವರ್ಷಕ್ಕೆ 10 ಸಾರ್ವಜನಿಕ ಮರಣದಂಡನೆಗಳನ್ನು ನೀಡಲಾಗುತ್ತಿತ್ತು. ಇದು ಸದ್ಯ ವಾರ್ಷಿಕ 100 ಮರಣದಂಡನೆಗಳಿಗೆ ಏರಿಕೆಯಾಗಿದೆ ಎಂದು ಕೊರಿಯಾ ಟೈಮ್ಸ್ ತಿಳಿಸಿದೆ.