ವಾಷಿಂಗ್ಟನ್: ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್-I.C.E ಇತ್ತೀಚೆಗೆ ಅಮೆರಿಕದಲ್ಲಿ ನೆಲೆಸಿರುವ ಅಕ್ರಮ ನಿವಾಸಿಗಳ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಒಟ್ಟು 14.45 ಲಕ್ಷ ಅಕ್ರಮ ವಲಸಿಗರಿದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ. ಈ ಪಟ್ಟಿಯಲ್ಲಿ ಹೊಂಡುರಾಸ್ 2 ಲಕ್ಷದ 61 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ಇನ್ನು ಗ್ವಾಟೆಮಾಲಾ ಎರಡನೇ ಸ್ಥಾನದಲ್ಲಿದೆ. I.C.E ವರದಿಯ ಪ್ರಕಾರ ಈ ಪಟ್ಟಿಯಲ್ಲಿ ಸುಮಾರು 18 ಸಾವಿರ ಭಾರತೀಯ ಅಕ್ರಮ ವಲಸೆಗಾರರಿದ್ದಾರೆ. ಸುಮಾರು 37 ಸಾವಿರ ಚೀನಿಯರು ಸಹ ಗಡಿಪಾರು ಆಗುವ ಭೀತಿಗೆ ಸಿಲುಕಿದ್ದಾರೆ.
ಸಿಗುತ್ತಾ ಐಸಿಇ ಅನುಮತಿ:ಹಾಗೆ ನೋಡಿದರೆ ಅಮೆರಿಕದಲ್ಲಿ ಲಕ್ಷಾಂತರ ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಅವರೆಲ್ಲರೂ ತಮ್ಮ ವಾಸವನ್ನು ಕಾನೂನುಬದ್ಧಗೊಳಿಸಿಕೊಳ್ಳುವುದಕ್ಕಾಗಿ ತೀವ್ರ ಯತ್ನ ನಡೆಸಿದ್ದರೂ I.C.E ಯಿಂದ ಅನುಮತಿ ಪಡೆಯಲು ವರ್ಷಗಳು ಬೇಕಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಕಠಿಣ ಕ್ರಮ ಎಂದಿರುವ ಹೊಸ ಅಧ್ಯಕ್ಷರಾಗಲಿರುವ ಟ್ರಂಪ್:ಅಕ್ರಮ ವಲಸಿಗರ ಬಗ್ಗೆ ಟ್ರಂಪ್ ಹಿಂದಿನಿಂದಲೂ ಕಠಿಣ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಇನ್ನು ಮೆಕ್ಸಿಕೋ ಗಡಿಯಿಂದ ಅಮೆರಿಕಕ್ಕೆ ಬರುವವರ ಬಗ್ಗೆಯಂತೂ ಟ್ರಂಪ್ಗೆ ಭಾರಿ ಆಕ್ರೋಶವಿದೆ. ಈ ಬಗ್ಗೆ ಈಗಾಗಲೇ ಮಾತನಾಡಿರುವ ಅವರು, ಅಕ್ರಮ ವಲಸಿಗರಿಗೆ ಕರುಣೆ ತೋರುವ ಉದ್ದೇಶ ನನಗಿಲ್ಲ, ಅಧಿಕಾರ ವಹಿಸಿಕೊಂಡ ತಕ್ಷಣ ಅವರನ್ನು ದೇಶದಿಂದ ಗಡಿಪಾರು ಮಾಡುವುದಾಗಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದಾರೆ.