ದೇರ್ ಅಲ್-ಬಲಾಹ್(ಗಾಜಾ ಪಟ್ಟಿ): ಮಧ್ಯ ಗಾಜಾದಲ್ಲಿ ಭಾನುವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ದೇರ್ ಅಲ್-ಬಲಾಹ್ ಪಟ್ಟಣದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಬಳಿ ಸ್ಥಳಾಂತರಗೊಂಡ ಜನ ಆಶ್ರಯ ಪಡೆದಿದ್ದ ಮಸೀದಿಯ ಮೇಲೆ ಈ ದಾಳಿ ನಡೆದಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರೊಬ್ಬರು ಆಸ್ಪತ್ರೆಯ ಶವಾಗಾರದಲ್ಲಿನ ಶವಗಳನ್ನು ಎಣಿಸಿ 18 ಜನ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದಾರೆ. ಮೃತರೆಲ್ಲರೂ ಪುರುಷರಾಗಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಮಸೀದಿಯ ಮೇಲಿನ ದಾಳಿಯ ಬಗ್ಗೆ ಇಸ್ರೇಲ್ ಮಿಲಿಟರಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಲೆಬನಾನ್ನಲ್ಲಿನ ಹಿಜ್ಬುಲ್ಲಾ ಮತ್ತು ಹಮಾಸ್ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಶನಿವಾರ ಬಾಂಬ್ ದಾಳಿ ನಡೆಸಿದ ನಂತರ ಭಾನುವಾರ ಮುಂಜಾನೆ ಗಾಜಾ ಮೇಲಿನ ಈ ದಾಳಿ ನಡೆದಿದೆ.
ಇಸ್ರೇಲ್ ದಾಳಿಗಳಿಂದ ಗಾಜಾದಲ್ಲಿ ಮೃತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಂಘರ್ಷ ಆರಂಭವಾದಾಗಿನಿಂದ ಈವರೆಗೆ ಸುಮಾರು 42 ಸಾವಿರ ಜನ ಸಾವಿಗೀಡಾಗಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಮೃತರ ಪೈಕಿ ನಾಗರಿಕರೆಷ್ಟು ಮತ್ತು ಹಮಾಸ್ ಉಗ್ರರೆಷ್ಟು ಎಂಬ ಬಗ್ಗೆ ಸಚಿವಾಲಯ ಮಾಹಿತಿ ನೀಡಿಲ್ಲ. ಸತ್ತವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ.