ಕುವೈತ್:ಕುವೈತ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿರುವ ಭಾರತೀಯರ ಪೈಕಿ 14 ಜನ ಕೇರಳ ರಾಜ್ಯಕ್ಕೆ ಸೇರಿದವರು ಎಂದು ಗುರುತಿಸಲಾಗಿದ್ದು, ಎಲ್ಲರ ಮೃತ ದೇಹಗಳನ್ನು ವಾಯಪಡೆಯ ವಿಮಾನದ ಮೂಲಕ ಭಾರತಕ್ಕೆ ತರಲಾಗುತ್ತದೆ ಎಂದು ವರದಿಯಾಗಿದೆ.
ಎಲ್ಲಾ 14 ಜನರ ಗುರುತು ಪತ್ತೆ ಹಚ್ಚಲಾಗಿದ್ದು, ಶಮೀರ್ ಉಮರುದ್ದೀನ್ (30) - ಕೊಲ್ಲಂ, ಕೆ.ರಂಜಿತ್ (34) - ಕಾಸರಗೋಡು, ಕೆಲು ಪೊನ್ಮಲೆರಿ (58) - ಕಾಸರಗೋಡು, ಸ್ಟೇಫಿನ್ ಅಬ್ರಹಂ ಸಬು (29) - ಕೊಟ್ಟಾಯಂ, ಆಕಾಶ್ ಸಾಯಿಸಿಧರನ್ ನಾಯರ್ (31) - ಪತ್ತನಂತಿಟ್ಟ, ಸಜ್ಜನ್ ಜಾರ್ಜ್ (29) - ಕೊಲ್ಲಂ, ಸಜು ವರ್ಘೆಸೆ (56) - ಪತ್ತನಂತಿಟ್ಟು, ಪಿ.ವಿ ಮುರಳಿಧರನ್ (68) - ಪತ್ತನಂತಿಟ್ಟ, ಲುಕು (48) - ಕೊಲ್ಲಂ, ಥಾಮಸ್ ಒಮ್ಮೆನ್ (37) - ಪತ್ತನಂತಿಟ್ಟ, ವಿಶ್ವ ಕೃಷ್ಣ ಕಣ್ಣೂರು, ನೂಹ (40) - ಮಲಪ್ಪುರಂ, ಬಹುಲೆಯನ್ (36) - ತ್ರಿಶೂರ್, ಶ್ರೀಹರಿ ಪ್ರದೀಪ್ (27) - ಕೊಟ್ಟಾಯಂ ಮೃತರು.
ಬುಧವಾರ (ಜೂ. 12) ದಕ್ಷಿಣ ಕುವೈತ್ನ ಮಂಗಾಫ್ ನಗರದಲ್ಲಿ ಕಾರ್ಮಿಕರು ವಾಸವಿದ್ದ ಬೃಹತ್ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಈವರೆಗೆ 49 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದು 40 ಜನ ಸಾವನ್ನಪ್ಪಿದ್ದಾರೆ. ಇನ್ನೂ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗ್ಗೆ ಹೊತ್ತು ಬೃಹತ್ ಕಟ್ಟಡದ ಅಡುಗೆಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿತ್ತು. ಘಟನೆ ವೇಳೆ ಕಟ್ಟಡದಲ್ಲಿ 160 ಜನರು ವಾಸಿಸುತ್ತಿದ್ದರು ಎಂದು ವರದಿಯಾಗಿದೆ.