ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವವರ ಮನಃ ಪರಿವರ್ತನೆ ಮಾಡಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 10 ಅನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನದ ಇತಿಹಾಸ ಮತ್ತು ಮಹತ್ವ:ವಿಶ್ವ ಆತ್ಮಹತ್ಯೆ ತಡೆ ದಿನವನ್ನು (WSPD) 2003 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ (WHO)ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸೂಸೈಡ್ ಪ್ರಿವೆನ್ಷನ್ ಪ್ರಾರಂಭಿಸಿತು. ಆತ್ಮಹತ್ಯೆಗಳನ್ನು ತಡೆಗಟ್ಟಬಹುದು ಎಂಬ ಸ್ಪಷ್ಟ ಸಂದೇಶವನ್ನು ಈ ದಿನ ನೀಡುತ್ತದೆ.
ಆತ್ಮಹತ್ಯೆಯು ಸಾಮಾಜಿಕ, ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮಗಳನ್ನು ಹೊಂದಿರುವ ಪ್ರಮುಖ ಸಾರ್ವಜನಿಕ ಸಮಸ್ಯೆಯಾಗಿದೆ. ಆತ್ಮಹತ್ಯೆಯು ಒಂದು ನಿರ್ಣಾಯಕ ಜಾಗತಿಕ ಸಮಸ್ಯೆಯಾಗಿ ಉಳಿದಿದ್ದು, ಇದು ವಿಶ್ವಾದ್ಯಂತ ಕುಟುಂಬ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ.
ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸೂಸೈಡ್ ಪ್ರಿವೆನ್ಷನ್ (IASP) ಲಾಭರಹಿತ ಸಂಸ್ಥೆಯಾಗಿದ್ದು, ಇದು ಆತ್ಮಹತ್ಯೆ ಮತ್ತು ಆತ್ಮಹತ್ಯಾ ನಡವಳಿಕೆಯನ್ನು ತಡೆಗಟ್ಟಲು ಹಾಗೂ ಅದರ ಪರಿಣಾಮಗಳನ್ನು ನಿವಾರಿಸಲು ಸಮರ್ಪಿತವಾಗಿದೆ. ಎಸ್ಎಎಸ್ಪಿಯೂ ಆತ್ಮಹತ್ಯೆ ತಡೆಗಟ್ಟುವಲ್ಲಿ ಜಾಗತಿಕವಾಗಿ ಪ್ರಮುಖ ಪಾತ್ರ ವಹಿಸುತ್ತಿದೆ.
ಆತ್ಮಹತ್ಯೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜು: ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿ ವರ್ಷ 700,000 ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಪ್ರಪಂಚದಲ್ಲಿನ ಎಲ್ಲ ಆತ್ಮಹತ್ಯೆಗಳ ಪೈಕಿ ಸುಮಾರು ಶೇ. 77 ದಷ್ಟು ಆತ್ಮಹತ್ಯೆಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ (ಎಲ್ಎಂಐಸಿ) ಸಂಭವಿಸುತ್ತವೆ ಎಂದು ಅಂದಾಜಿಸಿದೆ. ಆತ್ಮಹತ್ಯೆ ಪ್ರಮಾಣವನ್ನು ಕಡಿಮೆ ಮಾಡುವುದು ಜಾಗತಿಕ ಪ್ರಾಮುಖ್ಯತೆ ಪಡೆದಿದೆ.
ಈ ವರ್ಷದ ಥೀಮ್ ಏನು?: ಈ ವರ್ಷದ ವಿಶ್ವ ಆತ್ಮಹತ್ಯೆ ತಡೆ ದಿನದ ಥೀಮ್ -'ಆತ್ಮಹತ್ಯೆ ಮೇಲಿನ ನಿರೂಪಣೆಯನ್ನು ಬದಲಾಯಿಸುವುದು - ಸಂಭಾಷಣೆಯನ್ನು ಪ್ರಾರಂಭಿಸುವುದು'( Changing the Narrative on Suicide -Start the Conversation) ಎಂಬುದಾಗಿದೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜಿಸಲು ಬಿಎಚ್ಯು ಅಭಿಯಾನ: ಸೆಪ್ಟೆಂಬರ್ 4 ರಂದು, ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಆತ್ಮಹತ್ಯೆ ತಡೆ ದಿನಕ್ಕೆ ಸಂಬಂಧಿಸಿದಂತೆ ಒಂದು ವಾರದ ಅಭಿಯಾನವನ್ನು ಪ್ರಾರಂಭಿಸಿದೆ. ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸಲು ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉತ್ತೇಜಿಸುವ ಗುರಿಯೊಂದಿಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಇದನ್ನು ಆರಂಭಿಸಲಾಗಿದೆ.
ಅಭಿಯಾನವು ಪೋಸ್ಟರ್-ಮೇಕಿಂಗ್, ಓಪನ್ ಮೈಕ್ ಸೆಷನ್‌ಗಳು, ಸ್ಲೋಗನ್ ಬರವಣಿಗೆ, ಸಂವಾದ, ನಾಟಕ ಮತ್ತು ಥೀಮ್‌ಗೆ ಹೊಂದಿಕೆಯಾಗುವ ಇತರ ಈವೆಂಟ್‌ಗಳು ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ.