ದಕ್ಷಿಣ ಭಾರತದ ಜನಪ್ರಿಯ ತಿಂಡಿ ಎಂದು ಕರೆಯಲ್ಪಡುವ ದೋಸೆಯನ್ನು ದೇಶದಾದ್ಯಂತ ಬಹುತೇಕ ಕಡೆ ತಯಾರಿಸಲಾಗುತ್ತದೆ. 5ನೇ ಶತಮಾನದಿಂದಲೂ ಈ ದೋಸೆ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಕರ್ನಾಟಕದಲ್ಲಂತೂ ಇದರ ಖ್ಯಾತಿ ತುಸು ಹೆಚ್ಚೇ ಎನ್ನಬಹುದು. ಉಡುಪಿಯ ದೇವಾಲಯದ ಬೀದಿಗಳಲ್ಲಿ ಇದು ಕಾಮನ್ ಎಂಬಂತೆ ಕಂಡು ಬರುತ್ತದೆ. ಸಾಮಾನ್ಯವಾಗಿ ದೋಸೆ, ದೋಸೈ ಅಥವಾ ದೋಸೇ ಎಂದು ಉಚ್ಚರಿಸಲಾಗುತ್ತದೆ. ಈ ಬಗ್ಗೆ ಕ್ರಿ.ಶ 1054ರಲ್ಲಿ ತಮಿಳು ಸಾಹಿತ್ಯದಲ್ಲಿ ಬಳಸಲಾಗಿದೆ. ಚಾಲುಕ್ಯ ರಾಜ ಸೋಮೇಶ್ವರ III ದೋಸೆ ಬಗ್ಗೆ ಉಲ್ಲೇಖಿಸಿದ್ದಾರೆ.
ದೋಸೆ ಬಗ್ಗೆ ಇರುವ ಬೇರೆ ಬೇರೆ ಐತಿಹ್ಯಗಳು;ಆಹಾರ ಇತಿಹಾಸಕಾರ ಪಿ ತಂಕಪ್ಪನ್ ನಾಯರ್ ಅವರು ದೋಸೆಯ ಮೂಲದ ಬಗ್ಗೆ ಉಲ್ಲೇಖಿಸಿದ್ದಾರೆ. ಯುದ್ಧ ಒಂದರಲ್ಲಿ ಕರ್ನಾಟಕ, ತಮಿಳುನಾಡಿನ ಮೇಲೆ ವಿಜಯ ಸಾಧಿಸಿತ್ತಂತೆ. ಅವರ ಪ್ರಕಾರ, ಇದು ಕರ್ನಾಟಕದ ಉಡುಪಿ ಪಟ್ಟಣದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಉಡುಪಿ ಹೋಟೆಲ್ ಎಂಬ ಪದದಿಂದಲೇ ಗುರುತಿಸಲಾಗುತ್ತಿದೆ. ಕ್ರಿಶ 1126ರ ಸುಮಾರಿಗೆ ಕರ್ನಾಟಕವನ್ನು ಆಳಿದ ಚಾಲುಕ್ಯ ರಾಜ ಸೋಮೇಶ್ವರ III, ತನ್ನ ಪುಸ್ತಕ ಮಾನಸೋಲ್ಲಾಸದಲ್ಲಿ ದೋಸೆ ಬಗ್ಗೆ ವಿವರಿಸಿದ್ದು, ದೋಸೆ ತಯಾರಿಸುವ ವಿಧಾನವನ್ನು ತಮ್ಮ ಮನೋಲ್ಲಾಸದಲ್ಲಿ ಬರೆದಿದ್ದಾರೆ.
ತಮಿಳುನಾಡಿನ ಆಹಾರ ಇತಿಹಾಸಕಾರ ಕೆ.ಟಿ.ಆಚಾಯ ಅವರು ತಮ್ಮ ಪುಸ್ತಕ ದಿ ಸ್ಟೋರಿ ಆಫ್ ಅವರ್ ಫುಡ್‌ನಲ್ಲಿ (2003) ದೋಸೆ 1ನೇ ಶತಮಾನದಿಂದಲೂ ತಮಿಳು ಸಂಸ್ಕೃತಿಯಲ್ಲಿತ್ತು ಎಂದು ಹೇಳುತ್ತಾರೆ. ಇದು ತಮಿಳುನಾಡು, ಪುದುಚೇರಿ, ಕೇರಳ, ಲಕ್ಷದ್ವೀಪ ದ್ವೀಪ ಮತ್ತು ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗಗಳನ್ನು ಒಳಗೊಂಡಿರುವ 'ಪ್ರಾಚೀನ ತಮಿಳು ಪ್ರದೇಶದ' ಭಾಗವಾಗಿತ್ತು ಎಂದು ಅವರು ಹೇಳಿದ್ದಾರೆ. ಸಂಗಮ್ ಸಾಹಿತ್ಯದ ಮೂಲಗಳನ್ನು ಉಲ್ಲೇಖಿಸಿ ಅವರು ಈ ಬಗ್ಗೆ ಬರೆದಿದ್ದಾರೆ.
ಇನ್ನೊಂದು ಮೂಲದ ಪ್ರಕಾರ, ಉಡುಪಿಯ ಭಟ್ಟರು, ಧಾರ್ಮಿಕ ವಿಧಿ ವಿಧಾನಗಳಿಂದ ತಪ್ಪಿಸಿಕೊಳ್ಳಲು ಮದ್ಯವನ್ನು ಸೇವಿಸಲು ಬಯಸಿದ್ದರಂತೆ, ಆದರೆ ಅದು ಲಭ್ಯವಿಲ್ಲದ ಕಾರಣದಿಂದಾಗಿ ಅಕ್ಕಿಯನ್ನೇ ಬಳಸಿ ಮದ್ಯ ತಯಾರಿಕೆ ಮುಂದಾಗಿದ್ದರಂತೆ, ಆದರೆ ಅವರು ಆ ಪ್ರಯತ್ನದಲ್ಲಿ ವಿಫಲರಾಗಿ ತವಾದಲ್ಲಿ ಹುದುಗು ಬಂದ ಅಕ್ಕಿ ಹಿಟ್ಟನ್ನು ರೌಂಡಾಗಿ ಹರಡಿ, ಅದನ್ನು ಬೇಯಿಸಿದಾಗ ಕ್ರಿಸ್ಪಿಯಾದ ಭಕ್ಷ್ಯ ರೆಡಿ ಆಗಿತ್ತಂತೆ. ಅದು ಮುಂದೆ, ದೋಸೆ ಆಯ್ತು ಎಂಬ ಕಥೆ ಕೂಡಾ ಇದೆ.
ಈಗ ಇದನ್ನು ದೋಸೆ ಎಂದು ಕರೆಯುವ ಕಾರಣವು ತಮಾಷೆ ಆಗಿಯೇ ಇದೆ. ಕನ್ನಡದಲ್ಲಿ ದೋಷ ಎಂಬ ಪದವು ಉಪದ್ರವ, ಕಳಂಕ ಮತ್ತು ಅಪರಾಧ ಎಂಬಂತಹ ಅರ್ಥಗಳನ್ನು ಸೂಚಿಸುತ್ತದೆ. ಭಟ್ಟರು ಮದ್ಯ ಸೇವಿಸಲು ಪ್ರಯತ್ನಿಸಿದಾಗ ಈ ತರಹದ ಖಾದ್ಯ ಹುಟ್ಟಿಕೊಂಡಿದೆ. ಅಂದು ಅವರು ಮಾಡಿದ ಎಡವಟ್ಟು ಈಗ ರುಚಿಕರವಾದ ಮತ್ತು ಗರಿಗರಿಯಾದ ದೋಸೆ ಎಂಬ ಖಾದ್ಯವಾಗಿ ಪ್ರಸಿದ್ಧಿಯಾಗಿದೆ.
ದೋಸೆ ಕೆಲವು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೆಚ್ಚಿನ ಕಾರ್ಬೋಹೈಡ್ರೇಟ್, ಕಡಿಮೆ ಕ್ಯಾಲೋರಿಯನ್ನು ಇದು ಹೊಂದಿದ್ದು, ಜನಪ್ರಿಯ ಆಹಾರ ಭಕ್ಷ್ಯಗಳಲ್ಲಿ ಒಂದಾಗಿದೆ. ದೋಸೆ ಹಿಟ್ಟು ಹುದುಗುವಿಕೆಯ ಪ್ರಕ್ರಿಯೆಯು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೆಚ್ಚಿಸುತ್ತದೆ. ಅವು ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ಸುಲಭವಾಗಿ ಜೀರ್ಣವಾಗುತ್ತವೆ. ಹೀಗಾಗಿ ದೋಸೆ ತಿಂಡಿಯಾಗಿ ಜನಪ್ರಿಯವಾಗಿದೆ.
ಈ ಸಾಂಪ್ರದಾಯಿಕ ಖಾದ್ಯವನ್ನು ತಿನ್ನಲು ನೂರಾರು ವಿಧಾನಗಳಿವೆ. ಒಳ್ಳೆಯ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಅದನ್ನು ಸೇವಿಸುವುದರೊಂದಿಗೆ ಅದರ ಸ್ವಾದವನ್ನು ಸವಿಯಬಹುದು.
ಬೆಳಗಿನ ಉಪಾಹಾರಕ್ಕಾಗಿ ಜನ ದೋಸೆಯನ್ನೇ ಏಕೆ ಆಯ್ಕೆ ಮಾಡುತ್ತಾರೆ: - ದೋಸೆ ಒಂದು ಬಹುಮುಖ ಭಕ್ಷ್ಯವಾಗಿದೆ. ಇದು ಉಪಾಹಾರವಾಗಿ ಜನಪ್ರಿಯ. ಒಮ್ಮೊಮ್ಮೆ ಇದನ್ನು ರಾತ್ರಿಯ ಊಟವಾಗಿಯೂ ರುಚಿ ನೋಡಬಹುದು. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿರುವುದರಿಂದ ರಾತ್ರಿ ಊಟಕ್ಕೆ ಬೆಸ್ಟ್.
ಕಾರ್ಬೋಹೈಡ್ರೇಟ್‌ಗಳ ಉತ್ತಮ ಆಕರ: ದೋಸೆ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದ್ದು, ಅದು ನಮ್ಮ ದೇಹಕ್ಕೆ ವಿವಿಧ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಶಕ್ತಿ ಒದಗಿಸುತ್ತದೆ. ತೂಕ ಇಳಿಸಬೇಕು ಎನ್ನುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಕಾರ್ಬೋಹೈಡ್ರೇಟ್‌ಗಳನ್ನು ಆರೋಗ್ಯಕರ ಮೂಲಗಳಿಂದ ಪಡೆಯುವುದು ಉತ್ತಮವಾದ ಮಾರ್ಗ. ಅದು ದೋಸೆಯಲ್ಲಿ ಲಭ್ಯವಿದೆ.
ಪ್ರೋಟೀನ್: ಪ್ರೋಟೀನ್ ನಮ್ಮ ದೇಹಕ್ಕೆ ಅಗತ್ಯವಿರುವ ಮತ್ತೊಂದು ಪೋಷಕಾಂಶ. ಇದು ನಿಧಾನವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ನಮ್ಮ ಕೂದಲು, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಸ್ಯಾಹಾರಿಗಳು ಸಾಮಾನ್ಯವಾಗಿ ಮಾಂಸ ತಿನ್ನುವವರಿಗಿಂತ ಭಿನ್ನವಾಗಿ ಪ್ರೋಟೀನ್‌ನ ಕೆಲವೇ ಕೆಲವು ಮೂಲಗಳನ್ನು ಹೊಂದಿದ್ದಾರೆ. ಹೀಗಾಗಿ ಆ ಕೊರತೆಯನ್ನು ದೋಸೆ ನೀಗಿಸುತ್ತದೆ. ಇದು ಹೆಚ್ಚು ಪ್ರೋಟೀನ್ ಹೊಂದಿಲ್ಲದಿದ್ದರೂ ಮಧ್ಯಮ ಪ್ರಮಾಣದಲ್ಲಿ ಪೂರೈಸುತ್ತದೆ.
ಕಡಿಮೆ ಕ್ಯಾಲೋರಿ: ದೋಸೆ ತುಂಬಾ ಹಗುರವಾಗಿರುವುದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೊರಿಗಳನ್ನು ಸೇರಿಸುವುದಿಲ್ಲ. ಸಾಮಾನ್ಯವಾದ ಒಂದು ದೋಸೆ ಸುಮಾರು 37 ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ಸ್ಟಫ್ಡ್ ದೋಸೆ ಸೇವಿಸಿದರೆ ಅದರ ಕ್ಯಾಲೋರಿ ತುಂಬಾ ಹೆಚ್ಚಾಗಿರುತ್ತದೆ.