ನವದೆಹಲಿ:ಈಹಿಂದೆಲ್ಲಾ ಮಕ್ಕಳು ಅತ್ತರೆ, ಅವರಿಗೆ ಆಟಿಕೆ ನೀಡಿ, ಮುದ್ದು ಮಾಡಿ ಲಲ್ಲೆಗರೆದು ಸಮಾಧಾನ ಮಾಡಲಾಗುತ್ತಿತ್ತು. ಆದರೆ, ಇಂದು ಪೋಷಕರು ರಚ್ಚೆ ಹಿಡಿಯುವ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಶಾಂತಗೊಳಿಸುತ್ತಿದ್ದಾರೆ. ಆದರೆ, ಈ ಅಭ್ಯಾಸ ಮಕ್ಕಳ ಭಾವನಾತ್ಮಕ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ.
ಮಕ್ಕಳು ಅತ್ತಾಗ ಸಮಾಧಾನಪಡಿಸಲು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ನಂತಹ ಡಿಜಿಟಲ್ ಸಾಧನಗಳನ್ನು ನೀಡುವುದರಿಂದ, ಇದು ವಯಸ್ಕರಾದ ಬಳಿಕ ಭಾವನೆಗಳ ನಿಯಂತ್ರಿಸುವಿಕೆಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಏಕಾಗ್ರತೆಗೂ ಭಂಗ ತರುತ್ತದೆ ಎಂದು ಹೇಳಲಾಗಿದೆ.
ಹಂಗೇರಿ ಮತ್ತು ಕೆನಡಾ ದೇಶಗಳ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಮಕ್ಕಳಿಗೆ ಮೊಬೈಲ್ ನೀಡುವ ಅಭ್ಯಾಸವನ್ನು ಪೋಷಕರ ಡಿಜಿಟಲ್ ಭಾವನೆಗಳ ನಿಯಂತ್ರಣ ಎಂದು ಈ ತಂಡ ಗುರುತಿಸಿದೆ.
ಮಕ್ಕಳ ಕಿರಿಕಿರಿ ತಪ್ಪಿಸಲು ಆಗ್ಗಿಂದಾಗ್ಗೆ ಮೊಬೈಲ್ ನೀಡಿ ಅವರನ್ನು ಶಾಂತಗೊಳಿಸುವುದರಿಂದ ಮಗು ತನ್ನ ಭಾವನೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ತಿಳಿಯುವುದಿಲ್ಲ. ಭವಿಷ್ಯದಲ್ಲಿ ಇದು ಗಂಭೀರ ಭಾವನೆ ನಿಯಂತ್ರಣ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಜೀವನದಲ್ಲಿ ಕೋಪ ನಿರ್ವಹಣೆ ಸಮಸ್ಯೆ ಎದುರಿಸುವಂತಾಗುತ್ತದೆ ಎಂದು ಹಂಗೇರಿಯ ಒಟ್ವೊಸ್ ಲೊರಂಡ್ ಯೂನಿವರ್ಸಿಟಿ ಸಂಶೋಧಕರಾದ ವೆರೊನಿಕಾ ಕೊನೊಕ್ ತಿಳಿಸಿದ್ದಾರೆ.