ಸಾಮಾನ್ಯವಾಗಿ ವಯಸ್ಸಾದಂತೆ ಮನುಷ್ಯನ ಚರ್ಮವು ಸುಕ್ಕುಗಟ್ಟುತ್ತದೆ. ಇದು ಸಹಜ ಕೂಡ. ಆದರೆ, ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಒತ್ತಡ, ನಿದ್ರೆಯ ಕೊರತೆ, ಮತ್ತಿತರ ಕಾಯಿಲೆಗಳಿಂದ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮುಖದಲ್ಲಿ ಸುಕ್ಕುಗಟ್ಟುವಿಕೆ ಎದ್ದು ಕಾಣುತ್ತದೆ. ಇದರಿಂದ ಮುದುಕರಂತೆ ಕಾಣುತ್ತಾರೆ. ಈ ಸಮಸ್ಯೆಯಿಂದ ಹೊರಬರಲು ಹಲವರು ಫೇಸ್ ಪ್ಯಾಕ್ ಮತ್ತಿತರ ಚಿಕಿತ್ಸೆಗಳ ಮೊರೆ ಹೋಗುವುದೂ ಉಂಟು. ಆದರೆ, ಇದರ ಬದಲು ನಿಮ್ಮ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಅಕಾಲಿಕ ವಯಸ್ಸಾಗುವುದನ್ನು ತಡೆಯಬಹುದು ಎಂದು ಹೇಳುತ್ತಾರೆ ಆರೋಗ್ಯ ತಜ್ಞರು. ಅದಕ್ಕೆ ಅವರು ಕೆಲವು ಟಿಪ್ಸ್ಗಳನ್ನು ಸಹ ನೀಡಿದ್ದಾರೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲೇ ಮುದುಕರಂತೆ ಕಾಣದಿರಲು ನೀವು ಈ ಆಹಾರ ಕ್ರಮಗಳನ್ನು ಪಾಲಿಸಿದರೆ ಮಾಡಿದರೆ ಸಾಕು.
ದ್ರಾಕ್ಷಿ: ದೈನಂದಿನ ಆಹಾರದಲ್ಲಿ ಅಲ್ಪ ಪ್ರಮಾಣದ ದ್ರಾಕ್ಷಿ ಸೇವನೆ ಮಾಡುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚು ದಿನ ಹಾಗೆಯೇ ಇರುತ್ತದೆ. ದ್ರಾಕ್ಷಿಯು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿರುವುದರಿಂದ ದೇಹದ ಆರೋಗ್ಯವು ಉತ್ತಮವಾಗಿ ಇರುತ್ತದೆ. ಚರ್ಮದ ಕೋಶಗಳನ್ನು ಶಾಶ್ವತವಾಗಿ ಆರೋಗ್ಯಕರವಾಗಿಯೂ ಇರಿಸುತ್ತದೆ. ಅಷ್ಟೇ ಅಲ್ಲ, ಇದು ಉತ್ತಮ ರಕ್ತ ಪರಿಚಲನೆಗೆ ಸಹಾಯ ಕೂಡ ಮಾಡುತ್ತದೆ. ಜೊತೆಗೆ ಸದೃಢ ಮೂಳೆ ಆರೋಗ್ಯಕ್ಕೂ ಸಹಕಾರಿಯಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ದಾಳಿಂಬೆ: ಈ ಹಣ್ಣು ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದ್ದರಿಂದ ನೇರಳಾತೀತ ವಿಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೇ, ಇದರಲ್ಲಿರುವ ವಿಟಮಿನ್ ಸಿ ಚರ್ಮದಲ್ಲಿ ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಿ ಮತ್ತಷ್ಟು ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ನಿತ್ಯ ದಾಳಿಂಬೆ ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಯಾಗಲಿದೆ ಎನ್ನುತ್ತಾರೆ ತಜ್ಞರು.
ಬ್ಲೂಬೆರ್ರಿ: ಈ ಹಣ್ಣುಗಳು ವಯಸ್ಸಾಗುವುದನ್ನು ದೂರವಿಡಲು ತುಂಬಾ ಸಹಕಾರಿ ಎನ್ನುತ್ತಾರೆ ತಜ್ಞರು. ವಿಶೇಷವಾಗಿ ಉತ್ಕರ್ಷಣ ನಿರೋಧಕಗಳು, ಸಿ, ಈ ವಿಟಮಿನ್ಗಳು ಮುಖದ ಚರ್ಮಕ್ಕೆ ಮೃದುತ್ವ ನೀಡುತ್ತದೆ. ಮಾಲಿನ್ಯ ಮತ್ತು ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸುವುದಲ್ಲದೆ, ಹೈಪರ್ಪಿಗ್ಮೆಂಟೇಶನ್ ಸಮಸ್ಯೆಯನ್ನು ಸಹ ತಡೆಯುತ್ತದೆ. ಅಲ್ಲದೆ, ಈ ಹಣ್ಣುಗಳಲ್ಲಿ ಹೇರಳವಾಗಿರುವ ಸ್ಯಾಲಿಸಿಲಿಕ್ ಆಮ್ಲವು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಇವುಗಳಲ್ಲಿರುವ ವಿಟಮಿನ್ ಸಿ ಮತ್ತು ಆಂಥೋಸಯಾನಿನ್ ದೇಹದಲ್ಲಿ ಕಾಲಜನ್ ಉತ್ಪಾದನೆಗೆ ಸಹಾಯ ಕೂಡ ಮಾಡುತ್ತದೆ. ಜೊತೆಗೆ ಚರ್ಮಕ್ಕೂ ಯೋಗ್ಯ ಎನ್ನುತ್ತಾರೆ ಪರಿಣತರು.
ಎಲೆಕೋಸು: ಎಲೆಕೋಸು A, C, D ಜೀವಸತ್ವಗಳು ಮತ್ತು ಇಂಡೋಲ್-3-ಕಾರ್ಬಿನಾಲ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇವು ಆ್ಯಂಟಿ ಏಜಿಂಗ್ ಸಮಸ್ಯೆಯನ್ನು ತಡೆಯುತ್ತದೆ. ಎಲೆಕೋಸಿನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮವನ್ನು ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ. ಮೂಳೆಗಳ ಆರೋಗ್ಯಕ್ಕೂ ಸಹಾಯ ಮಾಡುತ್ತವೆ. ಎಲೆಕೋಸಿನ ನಿಯಮಿತ ಸೇವನೆಯು ದೀರ್ಘಕಾಲದ ಕಾಯಿಲೆಗಳಾದ ಹೃದ್ರೋಗ ಮತ್ತು ಅನೇಕ ರೀತಿಯ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ ತಜ್ಞರು.