ಹೈದರಾಬಾದ್: ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ಹೊಂದಿರುವ ಜನರು ಉತ್ತಮ ಆಹಾರ ಸೇವನೆ ಅಭ್ಯಾಸಕ್ಕೆ ಒತ್ತು ನೀಡುವುದರಿಂದ ಸಾಕಷ್ಟು ವಿಟಮಿನ್, ಪೋಷಕಾಂಶವನ್ನು ಪಡೆಯಬಹುದು. ಆದರೆ, ಅನೇಕ ಮಂದಿ ಇಂದು ಅತಿ ಕಾಳಜಿಯಿಂದ ವಿಟಮಿನ್ಗಳ ಮಾತ್ರೆ ಸೇವನೆಗೂ ಅದ್ಯತೆ ನೀಡುತ್ತಾರೆ. ಈ ರೀತಿ ನೀವು ನಿತ್ಯ ವಿಟಮಿನ್ ಮಾತ್ರೆಯನ್ನು ಸೇವಿಸುತ್ತಿದ್ದೀರಾ? ಹಾಗಾದ್ರೆ ಮತ್ತೊಮ್ಮೆ ಈ ಬಗ್ಗೆ ಯೋಚಿಸಿ. ಇದು ಆರೋಗ್ಯಯುತ ಜನರಲ್ಲಿ ಯಾವುದೇ ರೀತಿಯಲ್ಲಿ ಸಾವಿನ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ವಿಚಾರವನ್ನು ಅಮೆರಿಕದ ನ್ಯಾಷನಲ್ ಕ್ಯಾನ್ಸರ್ ಇನ್ಸಿಟಿಟ್ಯೂಟ್ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ.
ಇದಕ್ಕಾಗಿ 20 ವರ್ಷಗಳ ಕಾಲ 4 ಲಕ್ಷ ಜನರನ್ನು ಗಮನಿಸಲಾಗಿದೆ. ಅನೇಕ ಮಂದಿ ಆರೋಗ್ಯ ಸುಧಾರಣೆಗೆ ವಿಟಮಿನ್ ಮಾತ್ರೆಗಳ ಸೇವನೆ ಮಾಡುತ್ತಾರೆ. ಇದನ್ನು ಸೇವನೆ ಮಾಡುವ ಬಹುತೇಕರಿಗೆ ಈ ಮಾತ್ರೆಗಳು ಎಷ್ಟು ಪರಿಣಾಮಕಾರಿ ಮತ್ತು ಪ್ರಯೋಜನ ಹೊಂದಿಲ್ಲ ಎಂಬ ಬಗ್ಗೆ ತಿಳಿದಿಲ್ಲ. ಈ ಹಿಂದೆ ನಡೆಸಲಾದ ಸಣ್ಣ ಅಧ್ಯಯನದಲ್ಲಿ ವಿಟಮಿನ್ ಮಾತ್ರೆಗಳು ಸಾವಿನ ತಡೆ ಅಪಾಯದಲ್ಲಿ ಮಿಶ್ರಿತ ಫಲಿತಾಂಶ ತೋರಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ಇದೀಗ ಸಂಶೋಧಕರು ದೀರ್ಘಕಾಲದ ವಿಟಮಿನ್ ಮಾತ್ರೆಗಳ ಸೇವನೆ ಮತ್ತು ಸಾವಿನ ಅಪಾಯದ ನಡುವಿನ ಸಂಬಂಧನವನ್ನು ಅರ್ಥ ಮಾಡಿಕೊಳ್ಳಲು ಸಂಶೋಧಕರು ಪ್ರಯತ್ನಿಸಿದ್ದಾರೆ.