ಹೈದರಾಬಾದ್: ಅಕ್ಕಿಯಲ್ಲಿರುವ ಅನೇಕ ಪೌಷ್ಠಿಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿದೆ. ಆದರೆ, ಯಾವ ಅಕ್ಕಿ ಉತ್ತಮ ಎಂಬ ಪ್ರಶ್ನೆ ಅನೇಕರನ್ನು ಕಾಡುವುದು ಸಹಜ. ಬಿಳಿ ಅಕ್ಕಿ ಅಥವಾ ಕೆಂಪು ಅಕ್ಕಿ ಯಾವುದರಿಂದ ಆರೋಗ್ಯ ಪ್ರಯೋಜನ ಅನ್ನೋದು ನಮಗೆ ಗೊತ್ತಿಲ್ಲ ಹಾಗಾಗಿ, ಯಾವುದನ್ನು ಬಳಕೆ ಮಾಡುವುದು ಎಂಬ ಗೊಂದಲ ಮೂಡುತ್ತದೆ ಸಹಜವೂ ಹೌದು. ಸಾಮಾನ್ಯವಾಗಿ ಬಿಳಿ ಅಕ್ಕಿಗೆ ಪರ್ಯಾಯವಾಗಿ ಕೆಂಪು ಅಕ್ಕಿಯನ್ನು ಅನೇಕರು ಬಳಕೆ ಮಾಡುತ್ತಾರೆ. ಈ ಕೆಂಪು ಅಕ್ಕಿ ಆರೋಗ್ಯಕ್ಕೆ ಅದ್ಬುತ ಪ್ರಯೋಜನ ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಪಾಲಿಶ್ ಮಾಡಿದ ಬಿಳಿ ಅಕ್ಕಿ ಸೇವಿಸುತ್ತಾರೆ. ಈ ಪಾಲಿಶ್ ಮಾಡಿದ ಅಕ್ಕಿ ಕೇವಲ ಕಾರ್ಬೋಹೈಡ್ರೇಟ್ ಅನ್ನು ಮಾತ್ರವೇ ಒಳಗೊಂಡಿರುತ್ತದೆ. ಆದರೆ, ಈ ಪಾಲಿಶ್ ಅಕ್ಕಿ ರುಚಿಯಲ್ಲಿ ಆಗಲಿ ಅಥವಾ ಪೌಷ್ಟಿಕಾಂಶದ ವಿಚಾರದಲ್ಲಿ ಆಗಲಿ ಉತ್ತಮವಲ್ಲ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಡಾ ಅಂಜಲಿ ದೇವಿ.
ಕೆಂಪು ಅಕ್ಕಿ ಬಳಕೆಯಿಂದಾಗುವ ಪ್ರಯೋಜನಗಳಿವು:
ಸಕ್ಕರೆ ಮಟ್ಟ ನಿಯಂತ್ರಣ: ಇತ್ತೀಚಿನ ದಿನದಲ್ಲಿ ಬಹುತೇಕ ಮಂದಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಂಪು ಅಕ್ಕಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹ ನಿಯಂತ್ರಣವಾಗಲಿದೆ ಎಂದು ಡಾ ಅಂಜಲಿ ದೇವಿ ಹೇಳಿದ್ದಾರೆ.
ಕೆಂಪು ಅಕ್ಕಿ ಸೇವನೆಯಿಂದ ಆಗುವ ಪ್ರಯೋಜನ ಕುರಿತು ಕೆಲವು ಸಂಶೋಧನೆಗಳನ್ನೂ ಕೂಡಾ ನಡೆಸಲಾಗಿದೆ. ಹಾರ್ವಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಶೋಧಕರು ಹೇಳುವಂತೆ, ಬಿಳಿ ಅಕ್ಕಿಯನ್ನು ವಾರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸೇವಿಸುವುದು ಮಧುಮೇಹ ಹೆಚ್ಚುವಂತೆ ಮಾಡುತ್ತದೆ. ಬಿಳಿ ಅಕ್ಕಿಯ ಪ್ರಮಾಣವನ್ನು 50 ಗ್ರಾಂಗಳಷ್ಟು ಕಡಿಮೆ ಮಾಡಿ, ಕೆಂಪು ಅಕ್ಕಿ ಸೇವಿಸುವುದರಿಂದ ಶೇ 16ರಷ್ಟು ಮಧುಮೇಹ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತಿಳಿಸಿದೆ.