ಬೆಂಗಳೂರು: ರಾಜ್ಯ ಸರ್ಕಾರ ಕ್ಯಾನ್ಸರ್ ಪೀಡಿತರಿಗೆ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ದುಬಾರಿ ಬೆಲೆಯ ಕಿಮೋಥೆರಪಿ ಚಿಕಿತ್ಸೆಯನ್ನು ಯಶಸ್ವಿನಿ ಯೋಜನೆಯಲ್ಲಿ ಸೇರ್ಪಡೆ ಮಾಡುತ್ತಿದೆ. ಇದು ಬಡ ರೋಗಿಗಳ ಪಾಲಿಗೆ ವರದಾನವಾಗಲಿದೆ. ಈಗಾಗಲೇ ರಾಜ್ಯದಲ್ಲಿ 474 ಆಸ್ಪತ್ರೆಗಳು ಈ ನೆಟ್ವರ್ಕ್ ಅಡಿ ಚಿಕಿತ್ಸೆ ನೀಡಲಿದೆ. ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸಿ ಇನ್ನಷ್ಟು ಆಸ್ಪತ್ರೆಗಳನ್ನು ಈ ಯೋಜನೆಯಡಿ ತರಲು ಶ್ರಮವಹಿಸುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆರ್ಥಿಕ ಹೊರೆ ಇಳಿಕೆ:ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಆಗದ ಬಡ ರೋಗಿಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಉಚಿತ ಕಿಮೋಥೆರಪಿ ಚಿಕಿತ್ಸೆ ಸಿಗುವಂತೆ ಮಾಡಲಾಗುವುದು. ಇದರ ಜೊತೆಗೆ ಸರ್ಜಿಕಲ್ ಆಂಕೊಲಾಜಿ ಹಾಗೂ ರೇಡಿಯೊ ಥೆರಪಿ ವಿಭಾಗದಿಂದ 261 ಚಿಕಿತ್ಸೆಗಳನ್ನು ಅಳವಡಿಸಿಕೊಂಡು ದುಬಾರಿ ವೆಚ್ಚದ ಕ್ಯಾನ್ಸರ್ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ಒದಗಿಸಲಾಗುತ್ತಿದೆ. ಯಶಸ್ವಿನಿ ಯೋಜನೆ ಅಡಿ ಒಂದೇ ವರ್ಷದಲ್ಲಿ 1,796 ಮಂದಿ 5.20 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜನವರಿ 2023ರಿಂದ ಜನವರಿ 2024ರ ಅವಧಿಯಲ್ಲಿ ಕಿಮೋ ಥೆರಪಿ ವಿಭಾಗದಲ್ಲಿ ಒಟ್ಟು ₹1.43 ಕೋಟಿ ವೆಚ್ಚದಲ್ಲಿ 1,097 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ರೇಡಿಯೊ ಥೆರಪಿ ವಿಭಾಗದಲ್ಲಿ ₹1.87 ಕೋಟಿ ವೆಚ್ಚದಲ್ಲಿ 228 ಮಂದಿಗೆ ಹಾಗೂ ಸರ್ಜಿಕಲ್ ಅಂಕೊಲಾಜಿ ವಿಭಾಗದಲ್ಲಿ ₹1.90 ಕೋಟಿ ವೆಚ್ಚದಲ್ಲಿ 411 ಮಂದಿ ಚಿಕಿತ್ಸೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.