Medicine Made From Blood:ನಿಮಗೆ ದೇಹದ ಮೇಲೆ ಏನಾದರೂ ಗಾಯಗಳಾಗಿವೆಯೇ? ಅಥವಾ ಮುರಿದ ಮೂಳೆಗಳು? ಹಾಗಾದರೆ ತೊಂದರೆ ಪಡಬೇಕಾಗಿಲ್ಲ. ಅಂಥವರಿಗಾಗಿಯೇ ಸಂಶೋಧಕರು ಅದ್ಭುತ ಔಷಧ ಕಂಡು ಹಿಡಿದು ಮಹತ್ವದ ಸಾಧನೆ ಮಾಡಿದ್ದಾರೆ. ಸಂಶ್ಲೇಷಿತ ಪೆಪ್ಟೈಡ್‌ಗಳು ಮತ್ತು ಮಾನವ ರಕ್ತವನ್ನು ಸಂಯೋಜಿಸುವ ಮೂಲಕ ವಿಜ್ಞಾನಿಗಳು ಈ ವಿನೂತನ ಔಷಧ ತಯಾರಿಸಿದ್ದಾರೆ. ಇದರಿಂದ ಗಾಯಗೊಂಡ ದೇಹದ ಭಾಗಗಳನ್ನು ತ್ವರಿತವಾಗಿ ಗುಣಪಡಿಸುತ್ತದೆ. ಮುರಿದ ಮೂಳೆಗಳನ್ನು ಸರಿಪಡಿಸುವಲ್ಲಿ ಇದು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರ್ಮಸಿ ಮತ್ತು ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಸಂಶೋಧಕರು ಈ ಹೊಸ ಆವಿಷ್ಕಾರ ಮಾಡಿದ್ದಾರೆ. ಭವಿಷ್ಯದಲ್ಲಿ ಗಾಯಗಳು ಮತ್ತು ರೋಗಗಳ ಚಿಕಿತ್ಸೆಯಲ್ಲಿ ಈ ಸಂಶೋಧನೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ದೇಹದ ಮೇಲೆ ಆಗಿರುವ ಸಣ್ಣ ಗಾಯಗಳು ಮತ್ತು ಮೂಳೆ ಮುರಿತಗಳನ್ನು ಚೆನ್ನಾಗಿ ಗುಣಪಡಿಸುತ್ತದೆ. ಈ ನೈಸರ್ಗಿಕ ಪ್ರಕ್ರಿಯೆಯಲ್ಲಿ ಮಾನವನ ರಕ್ತವು ತುಂಬಾ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ತಜ್ಞರು.
ರಕ್ತದಲ್ಲಿನ ಪುನರುತ್ಪಾದಕ ವಸ್ತುವಾದ ಹೆಮಟೋಮಾ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂಗಾಂಶಗಳನ್ನು ಸರಿಪಡಿಸುವಲ್ಲಿ ಇದು ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತದೆ. ಇದರ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಮಾನವರ ರಕ್ತದೊಂದಿಗೆ ಸಂಶ್ಲೇಷಿತ ಪೆಪ್ಟೈಡ್‌ಗಳನ್ನು ಸಂಯೋಜಿಸುವ ಮೂಲಕ ಜೈವಿಕ ಸಹಕಾರಿ ವಸ್ತುವನ್ನು ರಚನೆ ಮಾಡಿದ್ದಾರೆ. ಅಣುಗಳು, ಜೀವಕೋಶಗಳು ಮತ್ತು ಅಂಗಾಂಶಗಳ ನೈಸರ್ಗಿಕ ದುರಸ್ತಿಗೆ ಇದು ಉಪಯುಕ್ತವಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.