ಫರೀದಾಬಾದ್: ಮಳೆಗಾಲ ಅನೇಕ ಸೋಂಕುಗಳನ್ನು ಹೊತ್ತು ತರುತ್ತದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ. ಅದರಲ್ಲೂ ಭಾರತದ ಕರಾವಳಿ ಮತ್ತು ಅಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಮಕ್ಕಳು ಮತ್ತು ವೃದ್ಧರು ಮಾರಣಾಂತಿಕ ಎನ್ಸೆಫಾಲಿಟಿಸ್ ವೈರಲ್ ಮತ್ತು ಇತರೆ ಮಿದುಳು ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಫರೀದಾಬಾದ್ನ ಅಮೃತಾ ಆಸ್ಪತ್ರೆಯ ನರರೋಗ ತಜ್ಞರು ಎಚ್ಚರಿಸಿದ್ದಾರೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿ ಕೂಡ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ಮಿದುಳು ಗಂಭೀರ ಪ್ರಮಾಣದ ಉರಿಯೂತ ಅನುಭವಿಸಿದಾಗ ಎನ್ಸೆಫಾಲಿಟಿಸ್ ಎಂದು ಕರೆಯುವ ಮಿದುಳಿನ ಸೋಂಕು ಸಂಭವಿಸುತ್ತದೆ. ಇದು ಮಿದುಳಿನ ಅಂಗಾಂಶವನ್ನು ಹಾನಿ ಮಾಡಬಲ್ಲದು. ಜೊತೆಗೆ, ನರಗಳ ಸಮಸ್ಯೆಯ ಲಕ್ಷಣಗಳೂ ಉಂಟಾಗಬಹುದು.
ಮಿದುಳಿನ ಸೋಂಕುಗಳಲ್ಲಿ ವೈರಲ್, ಬ್ಯಾಕ್ಟೀರಿಯಾ, ಟ್ಯೂಬರ್ಕ್ಯುಲರ್, ಫಂಗಲ್ ಅಥವಾ ಪ್ರೊಟೊಜೋಲ್ನಂತಹ ಹಲವು ವಿಧಗಳಿದೆ. ಇವುಗಳ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ತಲೆನೋವು, ವಾಂತಿ ಎಂದು ಅಮೃತಾ ಆಸ್ಪತ್ರೆ ನರರೋಗತಜ್ಞ ಡಾ.ಸಂಜಯ್ ಪಾಂಡೆ ಮಾಹಿತಿ ನೀಡಿದರು.
ಮಕ್ಕಳು ಮತ್ತು ಹಿರಿಯ ನಾಗರಿಕರು ಹೆಚ್ಚು ದುರ್ಬಲರಾಗಿರುವ ಹಿನ್ನೆಲೆಯಲ್ಲಿ ಈ ಸೋಂಕಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಕೆ ಮಾಡಿದಾಗ ಮೆದುಳಿನ ಸೋಂಕುಗಳು ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿದೆ.