ಬೆಂಗಳೂರು: 'ಮನೆಯಿಂದ ಹೊರ ಬರುವ ಪರಿಸ್ಥಿತಿಯೇ ಇರಲಿಲ್ಲ. ನನ್ನನ್ನು ಮೂರು ತಿಂಗಳು ಮನೆಯಲ್ಲಿ ಮಲಗಿಸಿದ್ರಿ, ಇನ್ಮುಂದೆ ನಾನು ಮಲಗುವುದಿಲ್ಲ' ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ನಾನು ತಲೆಮರಿಸಿಕೊಳ್ಳುವ ರಾಜಕಾರಣಿ ಆಗಿದ್ದೆನಾ?' ಎಂದು ಪ್ರಶ್ನೆ ಮಾಡಿದರು.
ಪರೋಕ್ಷವಾಗಿ ವಾಗ್ದಾಳಿ: 'ಇವತ್ತು ಹೇಳ್ತಿನಿ, ಇಲ್ಲಿಂದ ಮುಂದಕ್ಕೆ ನನ್ನ ಹೋರಾಟ ಮತ್ತೆ ಪ್ರಾರಂಭ ಆಗುತ್ತದೆ. ದೇವೇಗೌಡ್ರು ಮನೆಯಲ್ಲಿ ಮಲಗುವುದಿಲ್ಲ. 62 ವರ್ಷ ಶಾಸಕನಾಗಿ, ವಿರೋಧ ಪಕ್ಷದ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಮಗಳ ಮನೆ ಹತ್ತಿರ ಮಲಗಿ ಬಿಟ್ರಲ್ಲ ನೀವು. ತುಂಬಾ ತೊಂದರೆ ತೆಗೆದುಕೊಂಡ್ರಿ' ಎಂದು ಯಾರ ಹೆಸರನ್ನೂ ಹೇಳದೇ ಮಾರ್ಮಿಕವಾಗಿ ನುಡಿದರು.
'ದೇವೇಗೌಡ ಮುಖದಲ್ಲಿ ಏನಾದ್ರು ಬದಲಾವಣೆ ಆಗಿದೆಯಾ?. ಯಾವ ದೇವೇಗೌಡ ಹೋರಾಟ ಮಾಡಿದ್ದನೋ, ಮೋದಿಯವರ ಜೊತೆ ಕೂತು ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ, ಅದೇ ದೇವೇಗೌಡ ಮತ್ತೆ ನಿಂತಿದ್ದೇನೆ' ಎಂದರು.
'ಯಾರು ಮಾಡಿದ್ದಾರೆಂದು ನನಗೆ ಗೊತ್ತು. ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಈ ರಾಜ್ಯ ಹೇಗೆ ನಡೆಸುತ್ತಿದ್ದಾರೆಂದು ಗೊತ್ತಿದೆ. ಕಾಲ ಬರುತ್ತದೆ, ಹೋರಾಟಕ್ಕೆ ನಿಲ್ಲುತ್ತೇನೆ. ಮನೆಯಲ್ಲಿ ಮಲಗುವುದಿಲ್ಲ' ಎಂದು ಕಾಂಗ್ರೆಸ್ ಸರ್ಕಾರ ಹಾಗೂ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ನಾಗಮಂಗಲ ಗಲಾಟೆ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೌಡರು, 'ನಾನು ಸುದ್ದಿಗೋಷ್ಠಿ ಕರೆದಿಲ್ಲ. ಕಚೇರಿಯಲ್ಲಿ ಇದ್ದು ಹೋಗಲು ಬಂದಿದ್ದೇನೆ. ಈ ರಾಷ್ಟ್ರದ ಪ್ರಮುಖ ಖಾತೆ ಹೊತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಬಂದಿದ್ದಾರೆ. ಅವರು ಪ್ರತಿದಿನ ಬರಲು ಆಗಲ್ಲ' ಎಂದು ತಿಳಿಸಿದರು.
ನಮ್ಮ ಪಕ್ಷ ಯಾವುದೇ ಕಳಂಕ ತರಲ್ಲ: 'ಸದಸ್ಯತ್ವ ಅಭಿಯಾನದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್ ಬಾಬುಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ಕೂಡ ಆಗಾಗ್ಗೆ ಬರುತ್ತೇನೆ, ಬೇರೆ ಬೇರೆ ಕಡೆ ಪ್ರವಾಸ ಕೂಡ ಮಾಡುತ್ತೇನೆ. ಎಲ್ಲ ಕಡೆ ಹೋಗುತ್ತೇನೆ. ಇವತ್ತು ರಾಜ್ಯದಲ್ಲಿ ಎನ್ಡಿಎಗೆ ಬೆಂಬಲಿಸಿರುವ ನಮ್ಮ ಪಕ್ಷ ಯಾವುದೇ ಕಳಂಕ ತರುವುದಿಲ್ಲ' ಎಂದು ಹೇಳಿದರು.
ಇದನ್ನೂ ಓದಿ: ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಆರ್.ವಿ.ದೇಶಪಾಂಡೆ - RV Deshpande