Easy Tips to Clean Plastic Boxes:ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಪ್ಲಾಸ್ಟಿಕ್ ಬಾಕ್ಸ್ಗಳು ಹೆಚ್ಚಾಗಿ ಕಾಣುತ್ತಿವೆ. ಸ್ನಾಕ್ಸ್, ಪಲ್ಯ, ಕಾಳು ಸೇರಿದಂತೆ ಅಗತ್ಯ ಸಾಮಗ್ರಿ ಸೇರಿದಂತೆ ಬಹುತೇಕ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿಯೇ ಹಾಕಿಡುತ್ತೇವೆ. ಇಂತಹ ಡಬ್ಬಗಳನ್ನು ಕಾಲ ಕಾಲಕ್ಕೆ ಶುಚಿಗೊಳಿಸವುದು ಅಗತ್ಯ. ಕಾರಣ ನಿಯಮಿತವಾಗಿ ಇವು ಶುಚಿಗೊಳಿಸದಿದ್ದರೆ, ವಾಸನೆ ಜೊತೆಗೆ ಪದಾರ್ಥಗಳು ಹಾಳಾಗುತ್ತದೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ಸರಿಯಾಗಿ ಶುಚಿ ಮಾಡುವುದು ಅಗತ್ಯವಾಗಿದೆ. ಒಂದು ವೇಳೆ ಇವುಗಳನ್ನು ಸೋಪ್ನಲ್ಲಿ ಶುಚಿಗೊಳಿಸಿದರೆ, ಅವು ಮತ್ತೊಂದು ರೀತಿಯ ವಾಸನೆಗೆ ಕಾರಣವಾಗುತ್ತದೆ. ಈ ಹಿನ್ನೆಲೆ ಅವುಗಳ ಸರಿಯಾದ ಶುಚಿ ವಿಧಾನ ಅರಿಯುವುದು ಅವಶ್ಯವಾಗಿದೆ.
ಬೇಕಿಂಗ್ ಸೋಡಾ: ತಜ್ಞರ ಪ್ರಕಾರ ಸೋಡಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಡಬ್ಬದಲ್ಲಿನ ಕೆಟ್ಟ ವಾಸನೆ ತೊಲಗಿಸುತ್ತದೆ. ಮೊದಲಿಗೆ ಡಬ್ಬವನ್ನು ತಣ್ಣಗಿನ ನೀರಿನಲ್ಲಿ ತೊಳೆಯಬೇಕು. ನಂತರ ಪ್ಲಾಸ್ಟಿಕ್ ಡಬ್ಬಕ್ಕೆ ಬೆಚ್ಚಗಿನ ನೀರನ್ನು ಹಾಕಿ ಬಳಿಕ ಅದಕ್ಕೆ ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಹಾಕಿ. ಬಳಿಕ ಒಂದು ದಿನ ಹಾಗೇ ಬಿಡಿ, ನಂತರ ಪಾತ್ರೆ ತೊಳೆಯುವ ಸೋಪಿನಿಂದ ತೊಳೆಯಿರಿ.
ನಿಂಬೆ ರಸ: ಇದರಲ್ಲಿನ ಸಿಟ್ರಿಕ್ ಆಮ್ಲ ಮತ್ತು ನಿಂಬೆ ರಸವೂ ಕೆಟ್ಟ ವಾಸನೆಯನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತದೆ. ಪಾತ್ರೆಗಳನ್ನು ತೊಳೆಯುವಾಗ ಸೋಪಿನ ನೀರಿಗೆ ನಿಂಬೆ ರಸ ಹಾಕಿ ತೊಳೆಯುವುದರಿಂದ ಪಾತ್ರೆ ಉತ್ತಮವಾಗಿರುತ್ತದೆ.
ವಿನಿಗರ್: ಪ್ಲಾಸ್ಟಿಕ್ ಅನ್ನು ಎಷ್ಟೇ ಶುಚಿಗೊಳಿಸಿದರೂ ಅದರಲ್ಲಿನ ಕೆಟ್ಟ ವಾಸನೆಗಳು ಸುಲಭವಾಗಿ ಹೋಗುವುದಿಲ್ಲ ಅಂದರೆ, ಅಂತಹ ಸಂದರ್ಭದಲ್ಲಿ ವಿನಿಗರ್ ಬಳಕೆ ಮಾಡಿ. ಈ ರೀತಿ ಮಾಡಲು ಪ್ಲಾಸ್ಟಿಕ್ ಡಬ್ಬವನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ಅದಕ್ಕೆ ಒಂದು ಚಮಚ ವಿನಿಗರ್ ಹಾಕಿ. ಐದಾರು ಗಂಟೆಗಳ ಬಳಿಕ ಸೋಪಿನ ನೀರಿನಲ್ಲಿ ತೊಳೆಯಿರಿ.