ಶಿವಮೊಗ್ಗ:ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಮಲೆನಾಡಿನ ಜಿಲ್ಲೆಗಳ ಜನತೆ ಪ್ರತಿವರ್ಷ ಡಿಸಂಬರ್ ಬಂದ್ರೆ ಸಾಕು ಭಯದ ವಾತಾವರಣದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಈ ಆತಂಕಕ್ಕೆ ಕಾರಣವಾಗಿರುವುದು ಕ್ಯಾಸನೂರು ಫಾರೆಸ್ಟ್ ಡಿಸೀಸ್. ಕ್ಯಾಸನೂರು ಫಾರೆಸ್ಟ್ ಡಿಸೀಸ್ 1957ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅರಣ್ಯದಂಚಿನ ಗ್ರಾಮವಾದ ಕ್ಯಾಸನೂರು ಗ್ರಾಮದಲ್ಲಿ ಈ ಕೀಟ ಪತ್ತೆಯಾಯಿತು.
ಈ ಕಾಯಿಲೆಯು ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾಗಿ ಇನ್ನುಳಿದ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಉಡುಪಿ, ಹಾಸನ, ಮೈಸೂರು, ಚಾಮರಾಜನಗರ ಸೇರಿದಂತೆ ಕಾಡು ಪ್ರದೇಶ ಹೊಂದಿರುವ ಭಾಗಗಳಲ್ಲಿ ಈ ರೋಗ ಹರಡಿದೆ. ಕೆಎಫ್ಡಿ ಪತ್ತೆಯಾಗಿ ಈಗ 66 ವರ್ಷಗಳು ಕಳೆದಿವೆ. ಈವರೆಗೂ ಈ ಕಾಯಿಲೆಗೆ ಸೂಕ್ತ ಲಸಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ಕಾಡಂಚಿನ ಗ್ರಾಮಸ್ಥರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಉಣ್ಣೆ ಕಚ್ಚುವುದರಿಂದ ಹರಡುತ್ತೆ ರೋಗ:ಕೆಎಫ್ಡಿ ರೋಗವು ಹೆಮಾಫಿಸಾಲಿಸ್ ಸ್ಪಿನಿಗೇರಾ ಎಂಬ ಕೀಟದಿಂದ ಮನುಷ್ಯನಿಗೆ ಹರಡುತ್ತಿದೆ. ಇದು ಕಾಡಿನಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ಗಾತ್ರದಲ್ಲಿ ಇರುತ್ತದೆ. ಇದು ಮುಖ್ಯವಾಗಿ ಕಾಡು ಪ್ರಾಣಿಗಳ ಮೈ ಮೇಲೆ ವಾಸವಾಗಿರುತ್ತದೆ. ಇದು ಪ್ರಾಣಿಗಳ ರಕ್ತ ಕುಡಿಯುತ್ತಾ ತನ್ನ ವಂಶಾಭಿವೃದ್ಧಿಯತ್ತ ಸಾಗುಸುತ್ತದೆ. ಇದು ಹೆಚ್ಚಾಗಿ ಮಂಗನ ದೇಹದಲ್ಲಿ ವಾಸವಾಗಿರುತ್ತದೆ. ಮಂಗ ಕಾಡಿನಲ್ಲಿ ಸತ್ತು ಹೋದರೂ, ಇದು ಬೇರೆ ಪ್ರಾಣಿಗಳಿಗೂ ಹರಡುತ್ತದೆ. ಇದಕ್ಕಾಗಿಯೇ ಮಂಗನ ಕಾಯಿಲೆ ಎಂದು ಸಹ ಕರೆಯುತ್ತಾರೆ. ಕಾಡಂಚಿನ ಗ್ರಾಮಗಳ ಜಾನುವಾರುಗಳು ಕಾಡಿಗೆ ಮೇಯಿಲು ಹೋದಾಗ ಅವುಗಳಿಗೆ ಈ ಉಣ್ಣೆ ಹತ್ತಿಕೊಳ್ಳುತ್ತವೆ.
ಈ ಜಾನುವಾರುಗಳು ಮನೆಗೆ ಬಂದಾಗ ಮನುಷ್ಯ ಇದರ ಸಂಪರ್ಕಕ್ಕೆ ಬಂದಂತಹ ಸಮಯದಲ್ಲಿ ಈ ಉಣ್ಣೆಗಳು ಮನುಷ್ಯನಿಗೆ ಕಚ್ಚಿದರೆ, ಮನುಷ್ಯನಿಗೆ ಮೊದಲು ಜ್ವರ ಬರುತ್ತದೆ. ನಂತರ ಸುಸ್ತು ಹೆಚ್ಚಾಗುತ್ತದೆ. ನಂತರ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದು ಮನುಷ್ಯನ ಜೀವಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ಜ್ವರಕ್ಕೆ ಮುನ್ನಚ್ಚರಿಕೆ ಕ್ರಮವಾಗಿ ಚಿಕಿತ್ಸೆ ಪ್ರಾರಂಭಿಸಿದರೆ, ರೋಗಕ್ಕೆ ತುತ್ತಾದವರನ್ನು ಬದುಕಿಸಬಹುದು. ಶಿವಮೊಗ್ಗ ಸೇರಿದಂತೆ, ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಕೆಎಫ್ಡಿ ಬಳಲುತ್ತಿರುವವರಿಗೆ ಚಿಕಿತ್ಸೆ ಕೊಡಿಸಲು ಪ್ರತ್ಯೇಕವಾದ ವಾರ್ಡ್ ತೆರೆಯಲಾಗಿದೆ.
2024ರಲ್ಲಿ ಜಿಲ್ಲೆಯಲ್ಲಿ 303 ಪ್ರಕರಣಗಳು ಪತ್ತೆ:ಈ ಉಣ್ಣೆಗಳು ಬೇಸಿಗೆಯಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುತ್ತವೆ. ಇದು ಜನವರಿಯಿಂದ ಮಳೆಗಾಲ ಪ್ರಾರಂಭವಾಗುವ ತನಕ ಅಂದ್ರೆ, ಜೂನ್, ಜುಲೈ ತಿಂಗಳವರೆಗೆ ಸಕ್ರಿಯವಾಗಿರುತ್ತವೆ. ಮಳೆ ಪ್ರಾರಂಭವಾದ್ರೆ, ಇವು ತಮ್ಮ ಸಂಚಾರ ಕಡಿಮೆ ಮಾಡುವುದರಿಂದ ಇವುಗಳು ಹರಡುವಿಕೆ ಪ್ರಮಾಣ ಕಡಿಮೆ ಆಗುತ್ತದೆ. 2024ರಲ್ಲಿ ಜಿಲ್ಲೆಯಲ್ಲಿ ಒಟ್ಟು 303 ಪ್ರಕರಣಗಳು ಕಂಡು ಬಂದಿವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 24, ಸಾಗರ- 13, ಹೊಸನಗರ- 24 ಹಾಗೂ ಸೊರಬದಲ್ಲಿ 2 ಪ್ರಕರಣಗಳು ಕಂಡು ಬಂದಿದೆ. ಜನವರಿಯಲ್ಲಿ ಹೊಸನಗರ ತಾಲೂಕಿನಲ್ಲಿ ಒಂದು ಸಾವು ಸಂಭವಿಸಿದೆ.
ಎಬಿಆರ್ಕೆ ಅಡಿ ಉಚಿತ ಚಿಕಿತ್ಸೆ:ಈಗ ಜಿಲ್ಲಾ ಆರೋಗ್ಯ ಇಲಾಖೆಯು ಕಾಡಂಚಿನ ಭಾಗದಲ್ಲಿ ಇಲಾಖೆಯು ಗುರುತಿಸಿಕೊಂಡಿರುವ ಭಾಗದಲ್ಲಿ ಕೆಎಫ್ಡಿ ಬಗ್ಗೆ ಅರಿವು ಮೂಡಿಸುತ್ತಿದೆ. ತಪಾಸಣೆ ಹೆಚ್ಚು ಇದರಿಂದ ರೋಗದ ಪತ್ತೆಗೆ ಸಹಕಾರಿ ಆಗುತ್ತದೆ. ಜಿಲ್ಲಾ ಸರ್ವೆಕ್ಷಣಾಧಿಕಾರಿಗಳು ಈಗ ಸರ್ವೆ ಪ್ರಾರಂಭಿಸಿದ್ದಾರೆ. ಜ್ವರ ಕಂಡು ಬಂದ ತಕ್ಷಣ ಅದನ್ನು ನಿರ್ಲಕ್ಷಿಸದೆ, ಅವರ ರಕ್ತ ಮಾದರಿ ಪರೀಕ್ಷಿಸಿ, ಅದಕ್ಕೆ ಸೂಕ್ತ ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೆಎಫ್ಡಿ ಕಂಡು ಬಂದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಹೋಗುವವರಿಗೆ ಬಿಪಿಎಲ್ ಕಾರ್ಡ್ ಇದ್ರೆ, ಅವರಿಗೆ ಎಬಿಆರ್ಕೆ ಅಡಿ ಉಚಿತ ಚಿಕಿತ್ಸೆ ಲಭ್ಯವಿದೆ ಎನ್ನುತ್ತಾರೆ ಶಿವಮೊಗ್ಗದ ವಿಡಿಎಲ್ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.