ಚೆನ್ನೈ (ತಮಿಳುನಾಡು):ದೇಹವನ್ನು ಸದೃಢವಾಗಿಡಲು, ಅಧಿಕ ರಕ್ತದೊತ್ತಡ, ಮಧುಮೇಹವನ್ನು ತಗ್ಗಿಸಲು ನಿಯಮಿತ ವ್ಯಾಯಾಮ ಮುಖ್ಯ. ನಡಿಗೆಯಿಂದಲೂ ಇದನ್ನು ಸಾಧಿಸಬಹುದು. ಸ್ವತಃ ತಾವೇ ಮಧುಮೇಹ ರೋಗದಿಂದ ಬಳಲುತ್ತಿದ್ದರೂ, ಆರೋಗ್ಯ ನಡಿಗೆಯಲ್ಲಿ ಪಾಲ್ಗೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ ತಮಿಳುನಾಡಿನ ಸಾರ್ವಜನಿಕ ಆರೋಗ್ಯ ಮತ್ತು ರೋಗ ತಡೆ ಇಲಾಖೆಯ ನಿರ್ದೇಶಕ ಸೆಲ್ವವಿನಾಯಗಂ.
ಹೌದು ಸೆಲ್ವವಿನಾಯಗಂ ಅವರು, ತಮಿಳುನಾಡಿನಲ್ಲಿ ‘ಆರೋಗ್ಯ ನಡಿಗೆ’ ಯೋಜನೆಯಡಿ ಜನರನ್ನು ಓಟದಲ್ಲಿ ಭಾಗಿಯಾಗುವಂತೆ ಮಾಡಿದ್ದಾರೆ. ಓಡುವ ಹವ್ಯಾಸವನ್ನು ಬೆಳೆಸಲು 'ಆರೋಗ್ಯ ನಡಿಗೆ' ರಸ್ತೆಗಳನ್ನು ನಿರ್ಮಿಸಿದ್ದಾರೆ. ಇವುಗಳಲ್ಲಿ ಬೆಳ್ಳಂಬೆಳಗ್ಗೆ ವಾಹನ ಸಂಚಾರ ನಿಷೇಧಿಸಿ, ಜನರು ಮಾತ್ರ ಇಲ್ಲಿ ನಡೆದಾಡುವಂತೆ ಮಾಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ - ಅಂಶಗಳ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ ಸಂಭವಿಸುವ ಸಾವುಗಳಲ್ಲಿ 74 ಪ್ರತಿಶತದಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಉಂಟಾಗುತ್ತವೆ. ‘ಪ್ರತಿದಿನ 30 ನಿಮಿಷ ನಡೆದರೆ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಅಧಿಕಾರಿ ಸೆಲ್ವವಿನಾಯಗಂ.
18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು ವಾರಕ್ಕೆ ಕನಿಷ್ಠ 150 ರಿಂದ 300 ನಿಮಿಷ ಆರಾಮದಾಯಕ ವ್ಯಾಯಾಮ ಅಥವಾ 75 ರಿಂದ 150 ನಿಮಿಷ ಕಠಿಣ ವ್ಯಾಯಾಮದಲ್ಲಿ ತೊಡಗಬೇಕು. ವ್ಯಾಯಾಮವು ಶೇಕಡಾ 27 ರಷ್ಟು ರಕ್ತದೊತ್ತಡ ಮತ್ತು ಮಧುಮೇಹ ಸಂಬಂಧಿತ ಸಮಸ್ಯೆಗಳನ್ನೂ, ಶೇಕಡಾ 30 ರಷ್ಟು ಹೃದ್ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ನಡಿಗೆಯಲ್ಲಿ ಆರೋಗ್ಯ ಸಚಿವರೂ ಭಾಗಿ:ತಮಿಳುನಾಡು ಸರ್ಕಾರದ ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ಅವರು ಮ್ಯಾರಥಾನ್ ಓಟದಲ್ಲಿ ತೊಡಗಿಸಿಕೊಂಡಿದ್ದು, ವ್ಯಾಯಾಮವನ್ನು ಪ್ರೋತ್ಸಾಹಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. 64 ವರ್ಷದ ಎಂ.ಸುಬ್ರಮಣಿಯನ್ ಇದುವರೆಗೆ 150 ಮ್ಯಾರಥಾನ್ ಓಟಗಳಲ್ಲಿ ಭಾಗವಹಿಸಿದ್ದಾರೆ. ಅವರ ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್‌ಗಳಲ್ಲಿ ದಾಖಲಿಸಲಾಗಿದೆ.
ಫಿಟ್‌ನೆಸ್ ಕುರಿತು ಮಾತನಾಡಿದ ಸಚಿವರು, 2004ರಲ್ಲಿ ನನಗೆ ಕಾರು ಅಪಘಾತವಾಗಿ ಕಾಲು ಮತ್ತು ತಲೆಗೆ ಗಾಯವಾಗಿತ್ತು. ಕಾಲು 6 ಕಡೆ ಮೂಳೆ ಮುರಿತವಾಗಿತ್ತು. ಮರುದಿನ ಸುಬ್ರಮಣಿಯನ್ ಅವರ ಆರೋಗ್ಯ ಗಂಭೀರವಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇದಲ್ಲದೇ, ನಾನು 25 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದೇನೆ. ಇಂದು ನಾನು ನಡೆಯಲು ಮಾತ್ರವಲ್ಲದೆ ಓಟದಲ್ಲಿ ಭಾಗವಹಿಸುತ್ತೇನೆ ಎನ್ನುತ್ತಾರೆ.
ಯುವಕರನ್ನು ಓಟದಲ್ಲಿ ಭಾಗವಹಿಸುವಂತೆ ಮಾಡಲು ತಮಿಳುನಾಡಿನ ಎಲ್ಲಾ 38 ಜಿಲ್ಲೆಗಳಲ್ಲಿ "ಆರೋಗ್ಯ ನಡಿಗೆ" ಯೋಜನೆಯಡಿ ವಾಕ್ ವೇಸ್ ಎಂಬ ವಾಕಿಂಗ್ ಪಥಗಳನ್ನು ಸ್ಥಾಪಿಸಲಾಗಿದೆ. ಬೆಸೆಂಟ್ ನಗರದಲ್ಲಿ 8 ಕಿ.ಮೀ. ಉದ್ದವಿದೆ. ಬೆಳಗ್ಗೆ 5ರಿಂದ 8ರವರೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇತ್ತೀಚೆಗಷ್ಟೇ ಚೆನ್ನೈಗೆ ಆಗಮಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ನ ಸಚಿವ ಅಬ್ದುಲ್ಲಾ ಬಿನ್ ದುಕ್ ಅಲ್ ಮರ್ರಿ ಅವರು ಈ ವಿಶಿಷ್ಟ ಮಾರ್ಗದಲ್ಲಿ ಓಡಿದ್ದರು. ಜಪಾನ್‌ನ ಟೋಕಿಯೊದಲ್ಲಿ 8 ಕಿಮೀ ಉದ್ದದ ವಾಕಿಂಗ್ ಪಾತ್ನಂತೆಯೇ ಇದನ್ನು ನಿರ್ಮಿಸಲಾಗಿದೆ. ಜಗತ್ತಿನಲ್ಲಿ ಟೋಕಿಯೊ ನಂತರ ಚೆನ್ನೈನಲ್ಲಿ ಇಂತಹ ವಾಕಿಂಗ್ ಪಾತ್ ಇದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ವಾಕಿಂಗ್ನಿಂದ ಖಂಡಿತಾ ತೂಕ ಕಳೆದುಕೊಳ್ಳಬಹುದು; ಆದರೆ, ದಿನಕ್ಕೆ ಎಷ್ಟು ದೂರ ನಡೆದರೆ ಪ್ರಯೋಜನ ಗೊತ್ತಾ? - calories burn in daily walk