ಬೀದಿ ಬದಿ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಹಮತದ ಅಭಿಮತ. ಅವುಗಳನ್ನು ತಿನ್ನಬಾರದು ಎಂದು ಹಲವು ಸಲಹೆ ನೀಡುತ್ತಾರೆ. ಹಾಗಂತ, ರಸ್ತೆ ಬದಿ ಇರುವ ಎಲ್ಲ ಆಹಾರ ಪದಾರ್ಥಗಳು ಕೆಟ್ಟದ್ದೇ, ಇದರಲ್ಲಿ ಒಳ್ಳೆಯ ಆಹಾರಗಳು ಇಲ್ಲವೇ ಎಂಬುದು ಪ್ರಶ್ನೆ. ಕೆಲ ನಿಪುಣರ ಪ್ರಕಾರ, ಬೀದಿ ಬದಿ ಸಿಗುವ ಆಹಾರಗಳಲ್ಲಿ ಒಳ್ಳೆಯವೂ ಇವೆ. ಮಳೆ ಜಿನುಗುತ್ತಿದ್ದಾಗ ಗರಿಗರಿ ಕುರುಕಲು ತಿಂಡಿ ನಾಲಿಗೆಗೆ ರುಚಿ ನೀಡುತ್ತವೆ ಎನ್ನುತ್ತಾರೆ ಅವರು.
ಹವಾಮಾನ ಬದಲಾದಂತೆ ತಿನಿಸುಗಳು ಕೂಡ ಬದಲಾಗುತ್ತವೆ. ಅದರಲ್ಲೂ ಮಳೆಗಾಲದಲ್ಲಿ ನಾಲಿಗೆಯ ಜೊತೆಗೆ ಮನಸು ಕೂಡ ಬಿಸಿ, ಖಾರವಾದುದನ್ನು ತಿನ್ನಲು ಬಯಸುತ್ತದೆ. ಹೀಗಾಗಿ, ಪ್ರತಿ ಬಾರಿ ಮಳೆ ಬಂದಾಗ ಏನನ್ನಾದರೂ ತಿನ್ನಬೇಕು ಎಂದೆನಿಸುತ್ತದೆ. ಆದರೆ, ಮನೆಯಲ್ಲಿ ತಿನಿಸು ತಯಾರಿಸಲು ಉದಾಸೀನ. ಈ ವೇಳೆ ಹೊರಗೆ ಸಿಗುವ ಆಹಾರ ತಿನ್ನಲು ಮನಸು ಸೂಚಿಸುತ್ತದೆ.
ಆದರೆ, ಬೀದಿ ಬದಿ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಯವೂ ನಮ್ಮಲ್ಲಿದೆ. ವಾಸ್ತವವಾಗಿ, ಎಲ್ಲ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವಾಗಿಲ್ಲ. ತುಸು ಯೋಚಿಸಿದರೆ, ಬೀದಿಗಳಲ್ಲಿ ಅನೇಕ ಆರೋಗ್ಯಕರ ತಿನಿಸುಗಳನ್ನು ಕಾಣಬಹುದು. ಅಂತಹ ಆಹಾರಗಳು ಯಾವುವು, ಅವುಗಳನ್ನು ತಿನ್ನಬಹುದೇ ಎಂಬುದರ ವಿವರ ನೋಡೋಣ.
ಮೆಕ್ಕೆಜೋಳ:ಮಳೆಗಾಲದ ತಿನಿಸಿನಲ್ಲಿ ಮೆಕ್ಕೆಜೋಳ ಕೂಡ ಒಂದು. ಇದನ್ನು ಕುದಿಸಿ ಅಥವಾ ಬೇಯಿಸಿ ತಿನ್ನಬಹುದು. ಜೋಳಕ್ಕೆ ಸ್ವಲ್ಪ ಉಪ್ಪು ಅಥವಾ ನಿಂಬೆ ರಸ ಹಚ್ಚಿ ಬೀದಿ ಬದಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮಳೆಯಲ್ಲಿ ಇದನ್ನು ತಿಂದರೆ, ವಾವ್ ಅನ್ನಿಸುವುದಲ್ಲದೇ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.
ಭೇಲ್ ಪುರಿ:ಖಾರ ಮತ್ತು ಹುಳಿ ಇರುವ ಕುರುಕಲು ತಿಂಡಿಯಾದ ಭೇಲ್ಪುರಿ ಅನೇಕರ ಇಷ್ಟದ ತಿಂಡಿ. ಮಳೆಗಾಲದಲ್ಲಿ ನಮ್ಮ ನಾಲಿಗೆಯನ್ನು ತೃಪ್ತಿಪಡಿಸುವ ಆಹಾರಗಳಲ್ಲಿ ಇದು ಮೊದಲಿದೆ. ಕಡ್ಲೆಪುರಿ(ಮಂಡಕ್ಕಿ), ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಮಸಾಲೆಯಿಂದ ಮಾಡಿದ ಭೇಲ್ ಪುರಿ ತಿಂದಲ್ಲಿ ಅದರ ಸ್ವಾದವೇ ಬೇರೆ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಯಲ್ಲ.