Can you eat banana before exercise?: ಬಹುತೇಕರಿಗೆ ಇಷ್ಟವಾಗುವ ಮತ್ತು ವರ್ಷಪೂರ್ತಿ ಲಭಿಸುವ ಹಣ್ಣು ಯಾವುದೆಂದರೆ, ಪ್ರತಿಯೊಬ್ಬರಿಗೂ ತಟ್ಟನೆ ನೆನಪಾಗುವುದು ಬಾಳೆಹಣ್ಣು. ಈ ಹಣ್ಣಿನಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನ ಲಭಿಸುತ್ತದೆ. ದಿನಕ್ಕೆ ಒಂದಾದರೂ ಬಾಳೆಹಣ್ಣನ್ನು ಸೇವಿಸಿ ಎಂದು ವೈದ್ಯರು ಮತ್ತು ಆಹಾರ ತಜ್ಞರು ಸಲಹೆ ನೀಡುತ್ತಾರೆ. ಬಾಳೆಹಣ್ಣು ಜೀರ್ಣಕ್ರಿಯೆಗೆ ಬಹು ಸಹಕಾರಿ ಆಗಿರುವುದರಿಂದ ಊಟವಾದ ನಂತರ ಬಾಳೆಹಣ್ಣು ಸೇವನೆ ಸಾಮಾನ್ಯವಾಗಿದೆ.
ಆದ್ರೆ, ವ್ಯಾಯಾಮ ಮಾಡುವ ಮುನ್ನ ಬಾಳೆಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸುತ್ತವೆ. ನೈಸರ್ಗಿಕವಾಗಿ ಶಕ್ತಿ ಮತ್ತು ವಿವಿಧ ಪೋಷಕಾಂಶಗಳಿಂದ ಕೂಡಿರುವ ಬಾಳೆಹಣ್ಣುಗಳನ್ನು ವ್ಯಾಯಾಮಕ್ಕೂ ಮೊದಲು ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳು ದೊರೆಯುತ್ತವೆ. ಆಹಾರ ತಜ್ಞರು ಸಲಹೆ ನೀಡಿರುವ ಪ್ರಕಾರ, ಆರು ಪ್ರಮುಖ ಪ್ರಯೋಜನಗಳನ್ನು ತಿಳಿಯೋಣ ಬನ್ನಿ..
ವ್ಯಾಯಾಮಕ್ಕೂ ಮುನ್ನ ಬಾಳೆಹಣ್ಣು ತಿನ್ನೋದು ಒಳ್ಳೆಯದಾ?
1. ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಹೇರಳ: ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿದ್ದು, ಇದು ವ್ಯಾಯಾಮದ ಸಮಯದಲ್ಲಿ ನಮ್ಮ ಕಾರ್ಯಕ್ಷಮತೆ, ಸ್ನಾಯುಗಳ ಬಲಗೊಳ್ಳಲು ಸಹಾಯವಾಗುತ್ತದೆ. 2018ರಲ್ಲಿ ಆಕ್ಸಪರ್ಡ್ ಅಕಾಡೆಮಿಕ್ನ ಫುಡ್ ಕ್ವಾಲಿಟಿ ಅಂಡ್ ಸೇಫ್ಟಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾಳೆಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಸಮೃದ್ಧವಾಗಿದೆ. ಇದು ದೇಹಕ್ಕೆ ಗ್ಲುಕೋಸ್ ಅಂಶವನ್ನು ನೀಡುತ್ತದೆ. ವ್ಯಾಯಾಮ ಮಾಡುವುದಕ್ಕೆ ಗ್ಲುಕೋಸ್ ತುಂಬಾ ಮುಖ್ಯವಾಗಿದ್ದು, ಬಾಳೆಹಣ್ಣಿನ ಸೇವನೆ ಮಾಡಿದರೆ, ಈ ಅಗತ್ಯವನ್ನು ಪೂರೈಸುತ್ತದೆ.
2. ಪೊಟ್ಯಾಸಿಯಮ್ ಸಮೃದ್ಧ: ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಸ್ನಾಯುಗಳ ಕಾರ್ಯ ಹಾಗೂ ನರಗಳ ಪ್ರಚೋದನೆಗಳಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ ಎಂಬುದು 2012ರಲ್ಲಿ ಅಡ್ವಾನ್ಸ್ ಇನ್ ನ್ಯೂಟ್ರಿಷನ್ ಜರ್ನಲ್‌ನಲ್ಲಿ ವರದಿಯಲ್ಲಿ ತಿಳಿಸಲಾಗಿದೆ. ಈ ಬಾಳೆಹಣ್ಣು ವ್ಯಾಯಾಮ ಮಾಡುವ ವೇಳೆಯಲ್ಲಿ ಬೆವರಿನ ಮೂಲಕ ಹೊರಹೋಗುವ ಪೊಟ್ಯಾಸಿಯಮ್ ಅನ್ನು ಮರುಪೂರಣಗೊಳಿಸುತ್ತದೆ. ಜೊತೆಗೆ ಸ್ನಾಯು ಸೆಳೆತ ಹಾಗೂ ಅತಿಯಾದ ಆಯಾಸ ತಡೆಯಲು ಸಹಾಯ ಮಾಡುತ್ತದೆ.
3. ಜೀರ್ಣಕ್ರಿಯೆಗೆ ಬಹುಪಯೋಗ:ಬಾಳೆಹಣ್ಣು ಜೀರ್ಣಕ್ರಿಯೆಗೆ ಅತ್ಯಂತ ಸಹಕಾರಿಯಾಗಿದೆ. ಇದಲ್ಲದೆ, ವ್ಯಾಯಾಮ ಮಾಡುವ ಮೊದಲು ಶಕ್ತಿ ಲಭಿಸಲೆಂದು ನಾವು ಸೇವಿಸುವ ಯಾವುದೇ ಹಣ್ಣು ಮತ್ತು ಇತರೆ ಆಹಾರಕ್ಕಿಂತ ಬಾಳೆಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ. ಹೀಗಾಗಿಯೇ ವ್ಯಾಯಾಮ ಮಾಡುವಾಗ ಹೊಟ್ಟೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆ ಕಂಡುಬರುವುದಿಲ್ಲ ಎಂದು ಹೇಳುತ್ತಾರೆ ಪೌಷ್ಟಿಕಾಂಶ ತಜ್ಞರು.
4. ಸ್ನಾಯುವಿನ ಚೇತರಿಕೆಗೆ ಪೂರಕವಾಗುತ್ತೆ: 2018ರಲ್ಲಿ ಪ್ಲೋಸ್ ಒನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ವರದಿಯ ಪ್ರಕಾರ, ಬಾಳೆಹಣ್ಣಿನ ಸೇವಿಸುವುದರಿಂದ ವ್ಯಾಯಾಮದ ಬಳಿಕ ಸ್ನಾಯುವಿನ ಚೇತರಿಕೆಗೆ ಹೆಚ್ಚು ಸಹಾಯ ಮಾಡುತ್ತದಂತೆ ಎಂದು ತಿಳಿದಿದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 (ಪಿರಿಡಾಕ್ಸಿನ್) ಹೇರಳವಾಗಿದೆ. ಇದು ವ್ಯಾಯಾಮದ ಬಳಿಕ ಸ್ನಾಯುಗಳನ್ನು ಪುನರ್ನಿರ್ಮಿಸಲು ತುಂಬಾ ಅವಶ್ಯಕವಾಗಿದೆ" ಎಂದು ತಜ್ಞರು ತಿಳಿಸುತ್ತಾರೆ.