ಕರ್ನಾಟಕ

karnataka

By ETV Bharat Karnataka Team

Published : Mar 8, 2024, 12:37 PM IST

ETV Bharat / health

ಮಹಾ ಶಿವರಾತ್ರಿ: ಈ ದಿನ ನಿಮ್ಮ ಉಪವಾಸ ಹೀಗಿರಲಿ

Fasting tips For Maha Shivaratri: ಶಿವಭಕ್ತರ ನೆಚ್ಚಿನ ಮಹಾ ಶಿವರಾತ್ರಿ ಬಂದಿದೆ. ನೀವು ಇಂದು ಉಪವಾಸ ಮಾಡುತ್ತೀರಾ?. ಹಾಗಿದ್ದರೆ ಈ ಲೇಖನ ನಿಮಗಾಗಿ. ಉಪವಾಸ ಮಾಡುವವರು ದೇಹ ದಣಿಯದಂತೆ ಏನೆಲ್ಲಾ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ತಿಳಿಯಿರಿ.

Maha Shivratri celebration  Worship to Shiva  devotees Visit to Shiva temple
ಮಹಾಶಿವರಾತ್ರಿ 2024: ಈ ದಿನ ನಿಮ್ಮ ಉಪವಾಸ ಈ ರೀತಿ ಇರಲಿ

ಹೈದರಾಬಾದ್(ತೆಲಂಗಾಣ):ಇಂದು ಹಿಂದೂಗಳಿಗೆ ಅತ್ಯಂತ ಮಂಗಳಕರ ದಿನ. ಮಹಾ ಶಿವರಾತ್ರಿಗೆ ಕಾದು ಕುಳಿತಿರುವ ಭಕ್ತರು ಶಿವ ಜಪದಲ್ಲಿ ತಲ್ಲೀನರಾಗಿದ್ದಾರೆ. ಬೆಳಗ್ಗಿನಿಂದಲೇ ಎಲ್ಲೆಡೆಯ ಶಿವ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.

ಪರಶಿವನಿಗೆ ಬಿಲ್ವಾರ್ಚನೆ, ರುದ್ರಾಭಿಷೇಕ ಸೇರಿದಂತೆ ಹಲವು ರೀತಿಯ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ. ಅನೇಕ ಭಕ್ತರು ಈ ದಿನ ಉಪವಾಸ ಆಚರಿಸುತ್ತಾರೆ. ರಾತ್ರಿಯಿಡೀ ಜಾಗರಣೆಗೂ ವ್ಯವಸ್ಥೆ ನಡೆಯುತ್ತಿದೆ. ಆದರೆ ಉಪವಾಸ ಮಾಡುವವರು ದಿನವಿಡೀ ಕಾರ್ಯ, ಕಲಾಪ ಅಂತೆಲ್ಲಾ ಇತರೆ ಚಟುವಟಿಕೆಗಳಲ್ಲಿ ಇರುತ್ತಾರೆ. ಹೀಗಿರಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಮಾನಸಿಕವಾಗಿ ಸಿದ್ಧರಾಗಿ: ಶಿವರಾತ್ರಿಯಂದು ಉಪವಾಸ ಮಾಡುವವರು ಮಾಡಬೇಕಾದ ಮೊದಲ ಕೆಲಸ ಮಾನಸಿಕವಾಗಿ ಸಿದ್ಧರಾಗುವುದು. ಒತ್ತಡ, ಆತಂಕ ಉಂಟುಮಾಡುವ ವಿಷಯಗಳ ಬಗ್ಗೆ ಗಮನ ಇರಕೂಡದು. ಇಡೀ ದಿನ ದೇವರ ಸೇವೆಯಲ್ಲಿಯೇ ಕಳೆಯುತ್ತೇನೆ ಎಂಬ ಸಕಾರಾತ್ಮಕ ಮನೋಭಾವನೆ ಬಹಳ ಮುಖ್ಯ. ಇದನ್ನು ಬೆಳೆಸಿಕೊಂಡರೆ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ.

ನೀರು ಕುಡಿಯಿರಿ: ಉಪವಾಸ ಇರುವವರು ಆಯಾಸವನ್ನು ಹೋಗಲಾಡಿಸಲು ದಿನವಿಡೀ ಕನಿಷ್ಠ 8 ಲೋಟ ನೀರು ಕುಡಿಯಬೇಕು. ಇದರಿಂದ ದಿನವೆಲ್ಲ ಚಟುವಟಿಕೆಯಿಂದ ಇರಲು ಸಾಧ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ನೀರು ಕುಡಿಯುವುದರಿಂದ ಹಸಿವು ತಡೆಯಬಹುದು.

ದೈಹಿಕ ಚಟುವಟಿಕೆ ಬೇಡ: ಉಪವಾಸ ಮಾಡುವವರು ದೈಹಿಕ ಶ್ರಮವನ್ನು ಒಳಗೊಂಡ ಚಟುವಟಿಕೆಗಳನ್ನು ತಪ್ಪಿಸುವುದು ಸೂಕ್ತ. ನೀವು ಡೆಸ್ಕ್ ಕೆಲಸ ಮಾಡುತ್ತಿದ್ದರೆ ನಿಮ್ಮ ಕೆಲಸವನ್ನು ನೀವು ಸುಲಭಗೊಳಿಸಬಹುದು. ಶಿವನಿಗೆ ಅತ್ಯಂತ ಪ್ರಿಯವಾದ ಈ ದಿನ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದು, ಭಕ್ತಿಗೀತೆಗಳನ್ನು ಕೇಳುವುದು ಮತ್ತು ಯೋಗ ಮಾಡುವುದರಿಂದ ಮನಸ್ಸು ಶಾಂತಿಯುತವಾಗಿರುತ್ತದೆ.

ಜ್ಯೂಸ್ ಕುಡಿಯುವುದು ಸೂಕ್ತ: ಗರ್ಭಿಣಿಯರು, ಮಧುಮೇಹ ಮತ್ತು ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರು ಉಪವಾಸ ಮಾಡುತ್ತಿದ್ದರೆ ಇನ್ನೂ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಅಂಥವರು ಆಯಾಸವನ್ನು ತಪ್ಪಿಸಲು ಎರಡು ಅಥವಾ ಮೂರು ಗಂಟೆಗಳಿಗೊಮ್ಮೆ ಹಾಲು, ಹಣ್ಣಿನ ರಸಗಳು, ಗಿಡಮೂಲಿಕೆಯ ಚಹಾ, ಮೊಸರು, ಮಜ್ಜಿಗೆಗಳನ್ನು ಸೇವಿಸಬಹುದು.

ಹಣ್ಣುಗಳು ತಿನ್ನಿ:ಉಪವಾಸದ ಸಮಯದಲ್ಲಿ ನಿಮಗೆ ತುಂಬಾ ಹಸಿವಾಗಿದ್ದರೆ ಬಾಳೆಹಣ್ಣು, ಪಪ್ಪಾಯಿ ಮತ್ತು ಕಲ್ಲಂಗಡಿಗಳಂತಹ ಹಣ್ಣುಗಳನ್ನು ತಿನ್ನಬಹುದು.

ಉಪವಾಸ ಬಿಡುವಿನ ವೇಳೆ ಈ ರೀತಿ ಮಾಡಿ: ಉಪವಾಸ ಇರುವವರು ಉಪವಾಸ ಬಿಡುವಾಗಲೂ ಕೆಲವು ಅಭ್ಯಾಸಗಳನ್ನು ಪಾಲಿಸಬೇಕು. ತಕ್ಷಣ ಅನ್ನ ಸೇವನೆ ಒಳ್ಳೆಯದಲ್ಲ. ಮೊದಲು ಯಾವುದಾದರೂ ಹಣ್ಣಿನ ರಸ ಕುಡಿಯಿರಿ. ಅದರ ನಂತರ ಯಾವುದೇ ಹಣ್ಣುಗಳು ಅಥವಾ ಲಘು ಆಹಾರ ಸೇವಿಸಲು ಸೂಚಿಸಲಾಗುತ್ತದೆ. ನಾರಿನಂಶ ಮತ್ತು ಪ್ರೊಟೀನ್ ಹೆಚ್ಚಿರುವ ಮತ್ತು ಕಡಿಮೆ ಕ್ಯಾಲೊರಿ ಇರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ:ಬೆಳಗಾವಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ: ಕಪಿಲೇಶ್ವರ ದೇಗುಲದಲ್ಲಿ ಭಕ್ತಸಾಗರ

ABOUT THE AUTHOR

...view details