ನವದೆಹಲಿ:ಗರ್ಭಕಂಠದ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ 9ರಿಂದ 14 ವರ್ಷದ ಹೆಣ್ಣು ಮಕ್ಕಳಿಕೆ ಲಸಿಕೆ ನೀಡುವ ಸರ್ಕಾರದ ಕ್ರಮವನ್ನು ವೈದ್ಯರು ಶ್ಲಾಘಿಸಿದ್ದಾರೆ. ಮಧ್ಯಂತರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿರುವ ಗರ್ಭಕಂಠ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಲಸಿಕೆ ನೀಡುವ ಕುರಿತು ಮಾತನಾಡಿ, ಎಲ್ಲಾ ಅರ್ಹ ವರ್ಗದ ಬಾಲಕಿಯರಿಗೆ ಈ ಲಸಿಕೆ ನೀಡುವುದನ್ನು ಪ್ರೋತ್ಸಾಹಿಸುವುದಾಗಿ ತಿಳಿಸಿದ್ದರು. ಕೇಂದ್ರದ ಈ ಕ್ರಮ ಉತ್ತಮವಾಗಿದ್ದು, ಭಾರತದಲ್ಲಿ ಇತ್ತೀಚಿನ ದಿನದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಗರ್ಭಕಂಠ ಕ್ಯಾನ್ಸರ್ ತಡೆಯುವ ಪ್ರಯತ್ನ ನಡೆಯಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿದ್ದು, ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್ನಲ್ಲಿ ಎರಡನೇ ಸ್ಥಾನ ಹೊಂದಿದೆ. ಈ ಕ್ಯಾನ್ಸರ್‌ನಿಂದ ಜೀವ ಉಳಿಸುವಲ್ಲಿ ಲಸಿಕೆಗಳು ಪ್ರಮುಖ ಪಾತ್ರವಹಿಸಲಿದೆ.
ಪ್ರಮುಖ ಹೆಜ್ಜೆ: ಈ ಕುರಿತು ಮಾತನಾಡಿರುವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್, ಡಾ.ಅನುರಾಧ ವಿನೋದ್, ಇದೊಂದು ಉತ್ತಮ ಕರೆ. ಭಾರತದಲ್ಲಿ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್ ತಡೆಯಲು ಇದು ಅತ್ಯಗತ್ಯ ಹೆಜ್ಜೆ ಎಂದರು.
ಗರ್ಭಕಂಠ ಕ್ಯಾನ್ಸರ್ ತಡೆಯುವಲ್ಲಿ ಲಸಿಕೆಗಳು ಹೆಚ್ಚು ಸಾಮರ್ಥ್ಯದಾಯಕವಾಗಿದೆ ಎಂದು ಸಾಬೀತಾಗಿದೆ. ಲಸಿಕೆ ಪಡೆಯದವರಿಗಿಂತ ಲಸಿಕೆ ಪಡೆದವರಲ್ಲಿ ಇದರ ಪರಿಣಾಮಗಳು ಹೇಗಿರಲಿದೆ ಎಂಬುದು ಸಾಬೀತಾಗಿದೆ. ಎಚ್ಪಿವಿ ಲಸಿಕೆಯ ಶೇ 88ರಷ್ಟು ಯಶಸ್ಸಿನ ದರ ಹೊಂದಿದೆ. ಈ ಲಸಿಕೆಯನ್ನು ಎರಡು ಬಾರಿ ನೀಡಲಾಗುವುದು. ಮೊದಲ ಡೋಸ್ 15 ವರ್ಷಕ್ಕಿಂತ ಮೊದಲು ಎರಡು ಬಾರಿ ಬಳಿಕ 26 ವರ್ಷದೊಳಗೆ 3 ಡೋಸ್ ನೀಡಲಾಗುವುದು. ಹದಿವಯಸ್ಸಿನ ಗುಂಪಿನಲ್ಲಿ ಎಚ್ಪಿವಿ ಸೋಂಕಿಗೆ ತೆರೆದುಕೊಳ್ಳುವ ಮುನ್ನವೇ ಈ ಲಸಿಕೆ ನೀಡುವುದು ಅತ್ಯಗತ್ಯ ಎಂದು ಹೇಳಿದ್ದಾರೆ.