ಬೆಂಗಳೂರು : ರಾಜ್ಯದಲ್ಲಿ ಇಷ್ಟು ದಿನ ಬಿಸಿಲಿನ ತಾಪಕ್ಕೆ ನಲುಗಿದ್ದ ಜನಕ್ಕೆ ಈಗ ಮಳೆ ತಂಪೆರೆದಿದೆ. ಇದರ ಬೆನ್ನಲ್ಲೇ ಡೆಂಘೀ ಭೀತಿ ಕೂಡ ಎದುರಾಗಿದೆ. ಮೇ 13ರ ವರೆಗೆ ರಾಜ್ಯದಲ್ಲಿ ಒಟ್ಟು 2,877 ಡೆಂಘೀ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,725 ಪ್ರಕರಣಗಳು ವರದಿಯಾಗಿದ್ದವು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿ - ಅಂಶಗಳು ತಿಳಿಸಿವೆ.
ಮಳೆಗಾಲದಲ್ಲಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಇಲಾಖೆಯು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (ಡಿಹೆಚ್ಒ) ಮತ್ತು ರೋಗ ನಿಯಂತ್ರಣ ಅಧಿಕಾರಿಗಳೊಂದಿಗೆ ಸಭೆಗಳು ನಡೆಸುವುದರ ಮೂಲಕ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಮನೆ-ಮನೆಗೆ ಭೇಟಿ ನೀಡುವುದು, ಜಿಲ್ಲಾ ಆಸ್ಪತ್ರೆಗಳಲ್ಲಿ ದೃಢಪಟ್ಟ ಡೆಂಘೀ ಪ್ರಕರಣಗಳ ಮೇಲ್ವಿಚಾರಣೆ, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನಗಳು ಮತ್ತು ಪರೀಕ್ಷಾ ಕಿಟ್‌ಗಳು ಮತ್ತು ಚಿಕಿತ್ಸಾ ಔಷಧಿಗಳ ಲಭ್ಯತೆಯನ್ನು ಪರೀಶೀಲನೆ ನಡೆಸಲಾಗುತ್ತಿದೆ.
ಈ ಡೆಂಘೀ ಜ್ವರವೂ ವಿಶೇಷವಾಗಿ ಈಡಿಸ್ ಎಂಬ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುತ್ತದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿ ನಂತರ ಸೋಂಕಿಲ್ಲದ ವ್ಯಕ್ತಿಯನ್ನು ಕಚ್ಚಿದಾಗ ಈ ಕಾಯಿಲೆಯು ಬರುತ್ತದೆ. ಇದು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.
ಡೆಂಘೀ ರೋಗದ ಲಕ್ಷಣಗಳು | ರೋಗ ನಿಯಂತ್ರಣಾ ಕ್ರಮಗಳು |
ಮೈಬಿಸಿ | ಸೊಳ್ಳೆಗಳು ಕಚ್ಚದಂತೆ ಕ್ರಮ ವಹಿಸುವುದು |
ತೀವ್ರ ತಲೆ ನೋವು | ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು |
ಕೀಲು ಮತ್ತು ಸ್ನಾಯು ನೋವು | ಸೊಳ್ಳೆ ಪರದೆ ಬಳಕೆ ಮಾಡುವುದು |
ದದ್ದು ಮತ್ತು ರಕ್ತಸ್ರಾವ | ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳ ಕಡಿಮೆ ಮಾಡುವುದು |
ವಾಂತಿ | ಶುದ್ಧ ಹಾಗೂ ಕುದಿಸಿ ಆರಿಸಿದ ನೀರು ಬಳಕೆ ಮಾಡುವುದು |
ವಾಕರಿಕೆ | ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳ ಬಳಕೆ ಮಾಡುವುದು |