ಕರ್ನಾಟಕ

karnataka

ETV Bharat / health

ದೇಶದ ವಿವಿಧೆಡೆ ಡೆಂಗ್ಯೂ ಪ್ರಕರಣ ಹೆಚ್ಚಳ: ಶೀಘ್ರ ರೋಗ ಪತ್ತೆಗೆ ವೈದ್ಯರ ಸಲಹೆ - Dengue Cases Surge

ಡೆಂಗ್ಯೂ ಸೋಂಕಿನ ಲಕ್ಷಣಗಳು ಕಂಡು ಬಂದಾಗ ಬೇಗನೆ ರೋಗ ಪರೀಕ್ಷೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ದೇಶದ ವಿವಿಧೆಡೆ ಡೆಂಗ್ಯೂ ಪ್ರಕರಣ ಹೆಚ್ಚಳ: ಶೀಘ್ರ ರೋಗ ಪತ್ತೆಗೆ ವೈದ್ಯರ ಸಲಹೆ
ದೇಶದ ವಿವಿಧೆಡೆ ಡೆಂಗ್ಯೂ ಪ್ರಕರಣ ಹೆಚ್ಚಳ: ಶೀಘ್ರ ರೋಗ ಪತ್ತೆಗೆ ವೈದ್ಯರ ಸಲಹೆ (IANS)

By ETV Bharat Karnataka Team

Published : Jun 30, 2024, 5:12 PM IST

ನವದೆಹಲಿ : ಮುಂಗಾರು ಮಳೆಯು ಬಿಸಿಲಿನ ಝಳದಿಂದ ಸಾಕಷ್ಟು ನಿರಾಳತೆ ತಂದಿರುವ ಮಧ್ಯೆ, ದೇಶದ ವಿವಿಧೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳ ಮೂಡಿಸಿದೆ. ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಡೆಂಗ್ಯೂ ಲಕ್ಷಣಗಳು ಕಂಡು ಬಂದಾಗ ಆದಷ್ಟು ತ್ವರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮತ್ತು ಡೆಂಗ್ಯೂ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಡೆಂಗ್ಯೂ ಇದು ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುವ ರೋಗವಾಗಿದೆ. ಸೊಳ್ಳೆಗಳು ಬೆಚ್ಚಗಿನ ಮತ್ತು ಆರ್ದ್ರ ವಾತಾವರಣದಲ್ಲಿ ಬೆಳೆಯುತ್ತವೆ. ಡೆಂಗ್ಯೂ ಸದ್ಯ ವಿಶ್ವದ ಸುಮಾರು 100 ಕ್ಕೂ ಹೆಚ್ಚಿನ ದೇಶಗಳಲ್ಲಿ ಪ್ರಮುಖ ಸಾಂಕ್ರಾಮಿಕ ರೋಗವಾಗಿದೆ.

"ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವಿಭಿನ್ನ ಲಕ್ಷಣಗಳೊಂದಿಗೆ ಕಾಣಿಸಿಕೊಂಡಿರುವ ಡೆಂಗ್ಯೂ ಜ್ವರ ಮಕ್ಕಳಿಗೆ ಹೆಚ್ಚು ತಗಲುವ ಅಪಾಯವಿದೆ. ಹೊಟ್ಟೆ ನೋವು, ವಾಂತಿ ಮತ್ತು ಹಸಿವು ಕಡಿಮೆಯಾಗುವುದು, ಜ್ವರ ಇವು ಡೆಂಗ್ಯೂದ ಆರಂಭಿಕ ಲಕ್ಷಣಗಳಾಗಿವೆ. ಆದರೆ ಈ ಋತುವಿನಲ್ಲಿ, ವಿಶಿಷ್ಟವಾದ ಮೇಲ್ಭಾಗದ ಉಸಿರಾಟದ ಸೋಂಕುಗಳು ಮತ್ತು ಗ್ಯಾಸ್ಟ್ರೋಎಂಟರೈಟಿಸ್ ಹೊಂದಿರುವ ಮಕ್ಕಳೂ ಸಹ ಡೆಂಗ್ಯೂ ಪಾಸಿಟಿವ್ ಆಗಿರಬಹುದು" ಎಂದು ಬೆಂಗಳೂರಿನ ಬನಶಂಕರಿಯ ಮದರ್ ಹುಡ್ ಆಸ್ಪತ್ರೆಯ ಮಕ್ಕಳ ಮತ್ತು ನವಜಾತ ಶಿಶುಶಾಸ್ತ್ರದ ಹಿರಿಯ ಸಲಹೆಗಾರ ಮತ್ತು ಮುಖ್ಯಸ್ಥ ಸಂತೋಷ್ ಕುಮಾರ್ ಐಎಎನ್ಎಸ್​ಗೆ ತಿಳಿಸಿದರು.

ಕರ್ನಾಟಕದಲ್ಲಿ 5,374 ಡೆಂಗ್ಯೂ ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ. ತೆಲಂಗಾಣದಲ್ಲಿ 882, ಒಡಿಶಾದಲ್ಲಿ 288, ಕೇರಳದ ಎರ್ನಾಕುಲಂನಲ್ಲಿ 400 ಪ್ರಕರಣಗಳು ವರದಿಯಾಗಿವೆ. ಆಂಧ್ರಪ್ರದೇಶದಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಎರಡೂ ಪ್ರಕರಣಗಳು ಕಂಡು ಬರುತ್ತಿವೆ.

ಹೆಚ್ಚಿನ ಜ್ವರ, ತೀವ್ರ ತಲೆನೋವು, ಸ್ನಾಯು ಮತ್ತು ಕೀಲು ನೋವು ಮತ್ತು ದದ್ದುಗಳಂತಹ ರೋಗಲಕ್ಷಣಗಳು ಡೆಂಗ್ಯೂವಿನ ಆರಂಭಿಕ ಸೂಚನೆಗಳಾಗಿವೆ. ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಇಡೀ ಸಮುದಾಯದಲ್ಲಿ ಹರಡುತ್ತದೆ, ಹೀಗಾಗಿ ಇದನ್ನು ತ್ವರಿತವಾಗಿ ಪತ್ತೆ ಮಾಡುವುದು ನಿರ್ಣಾಯಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಕೆಲ ಸಂದರ್ಭಗಳಲ್ಲಿ, ಸೋಂಕು ಡೆಂಗ್ಯೂ ಹೆಮರಾಜಿಕ್ ಜ್ವರ ಅಥವಾ ಡೆಂಗ್ಯೂ ಶಾಕ್ ಸಿಂಡ್ರೋಮ್ ಎಂದೂ ಕರೆಯಲ್ಪಡುವ ತೀವ್ರ ಡೆಂಗ್ಯೂಗೆ ಪರಿವರ್ತನೆಯಾಗಬಹುದು.

ನಿರಂತರ ವಾಂತಿ, ಕಿಬ್ಬೊಟ್ಟೆ ನೋವು, ಸಿಂಬಳದ ಮೂಲಕ ರಕ್ತಸ್ರಾವ ಮತ್ತು ರಕ್ತಪರಿಚಲನಾ ವೈಫಲ್ಯದ ಚಿಹ್ನೆಗಳು ತೀವ್ರತರವಾದ ಡೆಂಗ್ಯೂವಿನ ಲಕ್ಷಣಗಳಾಗಿವೆ.

"ಆರಂಭಿಕ ರೋಗನಿರ್ಣಯವು ಈ ರೋಗಲಕ್ಷಣಗಳನ್ನು ನಿವಾರಿಸಲು ಸಮಯೋಚಿತವಾಗಿ ಔಷಧಿಗಳನ್ನು ನೀಡಲು ಅನುವು ಮಾಡಿಕೊಡುತ್ತದೆ, ಅನಾರೋಗ್ಯದ ಸಮಯದಲ್ಲಿ ರೋಗಿಯು ಆರಾಮ ಪಡೆಯುವುದು ಸೂಕ್ತ." ಎಂದು ಬೆಂಗಳೂರಿನ ಆಸ್ಟರ್ ಆರ್ ವಿ ಆಸ್ಪತ್ರೆಯ ಆಂತರಿಕ ಔಷಧದ ಪ್ರಮುಖ ಸಲಹೆಗಾರ ಅರವಿಂದ ಎಸ್ ಎನ್ ಐಎಎನ್ಎಸ್​ಗೆ ತಿಳಿಸಿದರು.

"ಆರಂಭಿಕ ರೋಗನಿರ್ಣಯವು ವೈಯಕ್ತಿಕ ರೋಗಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಇತರರಿಗೆ ಡೆಂಗ್ಯೂ ವೈರಸ್ ಹರಡುವುದನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅನಾರೋಗ್ಯದ ಆರಂಭದಲ್ಲಿ ಸೋಂಕಿತ ವ್ಯಕ್ತಿಗಳನ್ನು ಗುರುತಿಸುವುದು ಮತ್ತು ಪ್ರತ್ಯೇಕಿಸುವುದು ಸೊಳ್ಳೆಗಳಿಗೆ ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ, ಸಮುದಾಯದಲ್ಲಿ ಡೆಂಗ್ಯೂ ಹರಡುವ ಚಕ್ರವನ್ನು ಮುರಿಯುತ್ತದೆ" ಎಂದು ಅವರು ಹೇಳಿದರು.

ಡೆಂಗ್ಯೂ ಬಂದಾಗ ಜ್ವರ, ವಾಂತಿ ಮತ್ತು ಅತಿಸಾರದಿಂದಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವಂತೆ ವೈದ್ಯರು ಕರೆ ನೀಡಿದರು. ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಮನೆಯ ಸುತ್ತಮುತ್ತ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ, ಸಂಪೂರ್ಣ ಮೈಮುಚ್ಚುವ ಬಟ್ಟೆ ಧರಿಸುವುದು ಸೇರಿದಂತೆ ರಕ್ಷಣಾತ್ಮಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ತಜ್ಞರು ಜನರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ಡೆಂಘೀ ಭೀತಿ: ಸಮಗ್ರ ಮೈಕ್ರೋ ಪ್ಲಾನ್ ಮೂಲಕ ರೋಗ ನಿಯಂತ್ರಣಕ್ಕೆ ಬಿಬಿಎಂಪಿ ಒತ್ತು - Dengue Threat

ABOUT THE AUTHOR

...view details