ನವದೆಹಲಿ: ದಕ್ಷಿಣ ರಾಜ್ಯಗಳಲ್ಲಿ ಮಳೆ ಹಿನ್ನೆಲೆ ಕೆರೆ ಕಟ್ಟೆ, ಕೊಳಗಳು ತುಂಬಿದ್ದು, ಈಜಾಡುವುದನ್ನು ತಪ್ಪಿಸುವುದು ಸೂಕ್ತ. ನಿಂತ ನೀರಿನಲ್ಲಿ ಮಿದುಳು ತಿನ್ನುವ ಅಮೀಬಾಗಳಿರುತ್ತವೆ. ಅವು ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈಗಾಗಲೇ ಇಂತಹ ಮಿದುಳು ತಿನ್ನುವ ಅಮೀಬಾಕ್ಕೆ ಕೇರಳದಲ್ಲಿ ಒಂದೇ ತಿಂಗಳ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಅಮೀಬಿಕ್ ಎನ್ಸೆಫಾಲಿಟಿಸ್ ಅಪರೂಪವಾಗಿದ್ದು, ಮಾರಣಾಂತಿಕವಾಗಿದ್ದು, ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿರುವ ನೈಗ್ಲೇರಿಯಾ ಫೌಲೇರಿದಿಂದ ಉಂಟಾಗುತ್ತದೆ. ಇದು ತಾಜಾ ನೀರಿನ ಸೆಲೆಗಳಾದ, ಕೆರೆ, ನದಿಗಳಲ್ಲೂ ಕಾಣಬಹುದಾಗಿದೆ. ಈ ಸೋಂಕಿಗೆ ವಾರದ ಹಿಂದೆ ಕಣ್ಣೂರಿನ 13 ವರ್ಷದ ಬಾಲಕಿ ಸಾವನ್ನಪ್ಪಿದ್ದಳು. ಇನ್ನು ಮೇ ತಿಂಗಳಲ್ಲಿ ಇದೇ ಸೋಂಕಿಗೆ ಐದು ವರ್ಷದ ಬಾಲಕಿ ಸಾವನ್ನಪ್ಪಿದ್ದಳು.
ಕೊಯಿಕ್ಕೋಡ್ನಲ್ಲಿ ಕೂಡ 12 ವರ್ಷದ ಬಾಲಕ ಈ ಅಮೀಬಿಕ್ ಸೋಂಕಿನ ಲಕ್ಷಣವನ್ನು ಹೊಂದಿರುವುದು ಕಂಡು ಬಂದಿದೆ. ಕೆರೆಯಲ್ಲಿ ಈಜಾಡಿದ ಎರಡು ದಿನದ ಬಳಿಕ ಈತ ಸೋಂಕಿಗೆ ಗುರಿಯಾಗಿದ್ದ. ನೈಗ್ಲೇರಿಯಾ ಫೌಲೆರಿ ಅಮೀಬಾದಿಂದ ಅಮೀಬಿಕ್ ಎನ್ಸೆಫಾಲಿಟಿಸ್ ಸೋಂಕು ತಗುಲುತ್ತದೆ. ನಿಂತ ನೀರಿಗೆ ತೆರೆದುಕೊಂಡ 9 ದಿನದ ಬಳಿಕ ಇದರ ಲಕ್ಷಣ ಕಾಣಿಸಿಕೊಳ್ಳುತ್ತದೆ. ಈ ಅಮೀಬಾ ಮೂಗಿನ ಮೂಲಕ ನೇರವಾಗಿ ಮಿದುಳು ಸೇರುತ್ತದೆ. ಇದು ಜೀವಕ್ಕೆ ಕುತ್ತು ತರುತ್ತದೆ ಎಂದು ಸಕ್ರಾ ವರ್ಲ್ಡ್ ಆಸ್ಪತ್ರೆಯ ನರವಿಜ್ಞಾನ ಸಂಸ್ಥೆಯ ಎಚ್ಒಡಿ ಡಾ ಅರ್ಜುನ್ ಶ್ರೀವತ್ಸ ತಿಳಿಸಿದ್ದಾರೆ.
ಸಾಮಾನ್ಯ ಲಕ್ಷಣ: ಈ ಸೋಂಕಿನ ಲಕ್ಷಣಗಳು ಎಂದರೆ ತಲೆನೋವು, ಜ್ವರ, ತಲೆಸುತ್ತು, ವಾಂತಿ, ಗೊಂದಲ, ಸೀನು, ಭ್ರಮೆ, ಬೆಳಕಿನ ಸೂಕ್ಷ್ಮತೆ ಮತ್ತು ಕೋಮಾ ಆಗಿದೆ. ಅಮೀಬಿಕ್ ಎನ್ಸಿಫಾಲಿಟಿಸ್ನಲ್ಲಿ ಎರಡು ವಿಧಗಳಿವೆ. ಪ್ರಾಥಮಿಕ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಮತ್ತು ಗ್ರ್ಯಾನುಲೋಮಾಟಸ್ ಅಮೀಬಿಕ್ ಎನ್ಸೆಫಾಲಿಟಿಸ್ (ಜಿಎಇ). ಪಿಎಂನ ಆರಂಭಿಕ ಲಕ್ಷಣಗಳನ್ನು ಮೆನಿಂಜೈಟಿಸ್‌ನಿ ರೀತಿಯಲ್ಲಿದೆ. ಜಿಎಇ ಲಕ್ಷಣಗಳು ಮೆದುಳಿನ ಬಾವು, ಎನ್ಸೆಫಾಲಿಟಿಸ್ ಅಥವಾ ಮೆನಿಂಜೈಟಿಸ್ ಹೊಂದಿದೆ. ಇದರ ಸಾವಿನ ದರ 90ರಷ್ಟಿದೆ.