ಐಜ್ವಾಲ್: ಸಾಂಕ್ರಾಮಿಕ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ಮಿಜೋರಾಂನಲ್ಲಿ ಹರಡುತ್ತಿದೆ. ರೋಗ ಹರಡುವುದನ್ನು ತಡೆಯಲು 635 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಐಜ್ವಾಲ್, ಚಂಫೈ ಮತ್ತು ಸೈಚುವಲ್ ಎಂಬ ಮೂರು ಜಿಲ್ಲೆಗಳಲ್ಲಿ ಸೋಂಕು ಹರಡುತ್ತಿದೆ. ಕಳೆದ ತಿಂಗಳಿನಿಂದ ಐಜ್ವಾಲ್‌ನಲ್ಲಿ ಒಂದೇ ಕಡೆ 308 ಹಂದಿಗಳನ್ನು ಹತ್ಯೆ ಮಾಡಲಾಗಿದೆ. ಪ್ರಾಣಿಗಳಲ್ಲಿ ಸಾಂಕ್ರಾಮಿಕ ಮತ್ತಿತರೆ ರೋಗಗಳ ತಡೆ ಮತ್ತು ನಿಯಂತ್ರಣ ಕಾಯ್ದೆ 2009ರ ಅಡಿಯಲ್ಲಿ, ಮೂರು ಜಿಲ್ಲೆಗಳ ವಿವಿಧ ಗ್ರಾಮಗಳನ್ನು ಸೋಂಕಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ಸೋಂಕಿತ ವಲಯದಿಂದ ಹಂದಿಗಳ ಪೂರೈಕೆಯನ್ನು ನಿಷೇಧಿಸಲಾಗಿದೆ. ಪಶು ಸಂಗೋಪನೆ ಇಲಾಖೆ ಕೊಂದಿರುವ ಹಂದಿಗಳ ಕಳೇಬರವನ್ನು ಗೊತ್ತುಪಡಿಸಲಾದ ಪ್ರದೇಶದಲ್ಲಿ ಸುಣ್ಣದ ಪುಡಿಯೊಂದಿಗೆ ಹೂಳಲು ಸೂಚಿಸಲಾಗಿದೆ.
ಹಂದಿ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸಚಿವ ಸಿ.ಲಾಲಸವಿವುಂಗ ಇತ್ತೀಚೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದರು. ರೋಗ ಎದುರಿಸಲು ಸರ್ಕಾರದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಎಲ್ಲರೂ ಪಾಲಿಸುವಂತೆ ಮನವಿ ಮಾಡಿದ್ದರು.