ನವದೆಹಲಿ: ಯಕೃತ್ ಹಾನಿಯಾಗಲು ಪ್ರಮುಖ ಕಾರಣ ಮದ್ಯ ಸೇವನೆ. ಆದರೆ, ತಜ್ಞರ ಪ್ರಕಾರ ಅತಿಯಾದ ಸಕ್ಕರೆ ಮತ್ತು ಎಣ್ಣೆ ಪದಾರ್ಥ ಸೇವನೆ ಕೂಡ ಲಿವರ್ಗೆ ಅಪಾಯವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೇ, ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.
ವಿಶ್ವ ಯಕೃತ್ ದಿನದ ಹಿನ್ನೆಲೆ ಈ ಕುರಿತು ಮಾತನಾಡಿರುವ ಆರೋಗ್ಯ ತಜ್ಞರು, ದೇಹದ ಸಾಮಾನ್ಯ ಕಾರ್ಯಾಚರಣೆಯಲ್ಲಿ ಆರೋಗ್ಯವಂತ ಲಿವರ್ನ ಪ್ರಾಮುಖ್ಯತೆ ಅಗತ್ಯ. ಯಕೃತ್ ದೇಹದ ಉಗ್ರಾಣದಂತೆ ಕಾರ್ಯಾಚರಣೆ ಮಾಡುತ್ತದೆ. ಅತಿ ಹೆಚ್ಚಿನ ಕ್ಯಾಲೋರಿ ಸೇವನೆ ಮಾಡಿದಾಗ ಅದು ಯಕೃತ್ನಲ್ಲಿ ಸೇರಿ, ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಇತರೆ ಚಯಾಪಚಯ ಕ್ರಿಯೆಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ.
ಆಲ್ಕೋಹಾಲ್ ಹೊರತಾದ ಲಿವರ್ ಸಮಸ್ಯೆಗಳು ಗಂಭೀರವಾಗಿದ್ದು, ಇವು ಸಕ್ಕರೆ ಮತ್ತು ಕೊಬ್ಬಿನ ಹೆಚ್ಚಿನ ಕ್ಯಾಲೋರಿ ಆಹಾರಗಳ ಸೇವನೆಯಿಂದ ಉಂಟಾಗುತ್ತವೆ. ಇದು ಕೂಡ ಆಲ್ಕೋಹಾಲ್ ಯಕೃತ್ ಮೇಲೆ ಬೀರುವ ಲಿವರ್ ಸಿರೋಸಿಸ್ನಂತಹ ತೀವ್ರ ಸಮಸ್ಯೆ ಉಂಟುಮಾಡುತ್ತದೆ. ಈ ಸಮಸ್ಯೆಗೆ ಪರಿಹಾರ ಎಂದರೆ ಯಕೃತ್ ಕಸಿ ಎಂದು ಅಪೋಲೋ ಪ್ರೊಹೆಲ್ತ್ನ ವೈದ್ಯಕೀಯ ನಿರ್ದೇಶಕರಾದ ಡಾ ಶ್ರೀ ವಿದ್ಯಾ ತಿಳಿಸಿದ್ದಾರೆ.
ಅಧಿಕ ಸಕ್ಕರೆ ಮತ್ತು ಎಣ್ಣೆಗಳ ಸೇವನೆಯಿಂದ ಯಕೃತ್ನ ಅಂಗಾಂಶದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಾಗುತ್ತದೆ. ಇದರಿಂದ ಯಕೃತ್ ಉರಿಯೂತವಾಗಿ ಗಾಯಕ್ಕೆ ಕಾರಣವಾಗಿ ಕಡೆಗೆ ಯಕೃತ್ ವೈಫಲ್ಯಕ್ಕೆ ಗುರಿಯಾಗಬಹುದು ಎಂದು ಮಹಿಮ್ನ ಹಿಂದೂಜಾ ಆಸ್ಪತ್ರೆಯ ಗ್ಯಾಸ್ಟ್ರೊಎಟರ್ನೊಲಾಜಿಯ ಜೂನಿಯರ್ ಕನ್ಸಲ್ಟಂಟ್ ಡಾ. ಪವನ್ ದೊಬ್ಲೆ ತಿಳಿಸುತ್ತಾರೆ.
ಅಧಿಕ ಸಕ್ಕರೆ ಮತ್ತು ಎಣ್ಣೆ ಪದಾರ್ಥಗಳ ಸೇವನೆ ಸ್ಥೂಲಕಾಯಕ್ಕೆ ಕಾರಣವಾಗುವ ಜೊತೆಗೆ ಇದು ಆಲ್ಕೋಹಾಲ್ ಹೊರತಾದ ಫ್ಯಾಟಿ ಲಿವರ್ ಸಮಸ್ಯೆಗೆ (ಎನ್ಎಎಫ್ಎಲ್ಡಿ) ಕಾರಣವಾಗುತ್ತದೆ. ದತ್ತಾಂಶವು ತೋರಿಸುವಂತೆ ಪ್ರತಿ ನಾಲ್ವರು ವಯಸ್ಕರಲ್ಲಿ ಒಬ್ಬರು ಸ್ಥೂಲಕಾಯ ಅಥವಾ ಅಧಿಕ ತೂಕ ಉಳ್ಳವರು ಈ ರೀತಿ ಯಕೃತ್ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ.
ಏಮ್ಸ್ನಿಂದ ಈ ಅಧ್ಯಯನ ನಡೆಸಿದ್ದು, ತಂಡವು ಭಾರತದಲ್ಲಿನ ಎನ್ಎಎಫ್ಎಲ್ಡಿ ಪ್ರಕರಣವನ್ನು ವಿಶ್ಲೇಷಣೆ ನಡೆಸಿದೆ. ಇದು ಭಾರತದಲ್ಲಿ ಮೂರನೇ ಒಂದರಷ್ಟು ಮಂದಿ ಅಂದರೆ ಶೇ 38ರಷ್ಟು ಜನ ಫ್ಯಾಟಿ ಲಿವರ್ ಸಮಸ್ಯೆ ಹೊಂದಿದ್ದಾರೆ. ಜೊತೆಗೆ ಈ ಪ್ರವೃತ್ತಿ ಮಕ್ಕಳಲ್ಲಿ ಕೂಡ ಶೇ 35ರಷ್ಟು ಪ್ರಮಾಣದಲ್ಲಿ ಕಾಣಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ. ಕ್ಲಿನಿಕಲ್ ಅಂಡ್ ಎಕ್ಸಿಪಿರಿಯನ್ಸ್ ಹೆಪಟೊಲೊಜಿ ಅಧ್ಯಯನವು ಆರಂಭಿಕ ವಯಸ್ಸಿನಲ್ಲಿನ ಜೀವನಶೈಲಿ ಆರೋಗ್ಯ ಸಮಸ್ಯೆ ಕುರಿತು ಗಮನ ಸೆಳೆಯುತ್ತದೆ.
ಯಕೃತ್ ಕಾಯಿಲೆ ಭಾರತದಲ್ಲಿ ಕಾಳಜಿದಾಯಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣ ತೋರದ ಹಿನ್ನೆಲೆ ಕೊನೆಯ ಹಂತದವರೆಗೆ ಈ ಎನ್ಎಎಫ್ಎಲ್ಡಿ ಪತ್ತೆಗೆ ಬರುವುದಿಲ್ಲ. ಇದು ಅನೇಕ ಯಕೃತ್ ಸಮಸ್ಯೆ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಹೌರಾದ ಆರ್ಎನ್ ಠಾಗೋರ್ ಆಸ್ಪತ್ರೆ ಮತ್ತು ನಾರಾಯಣ ಆಸ್ಪತ್ರೆಯ ಯಕೃತ್ ಕಸಿ ವೈದ್ಯ ಡಾ. ರಾಹುಲ್ ರಾಯ್ ತಿಳಿಸಿದ್ದಾರೆ.
ಪಾಶ್ಚಿಮಾತ್ಯದ ಆಹಾರ ಪದ್ಧತಿಗಳಾದ ಫಾಸ್ಟ್ಫುಡ್ ಸೇವನೆ, ಹಣ್ಣು ಮತ್ತು ತರಕಾರಿ ಸೇವನೆ ಕೊರತೆ ಈ ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗಲಿದೆ.
ಇದನ್ನೂ ಓದಿ: ಕುಡಿತ ತ್ಯಜಿಸುವುದು ಯಕೃತ್ಗೆ ಒಳ್ಳೆಯದು; ಒಮ್ಮೆಲೇ ಎಣ್ಣೆ ಬಿಡುವುದರಿಂದ ಕಾಣಿಸಿಕೊಳ್ಳುವ ಲಕ್ಷಣಗಳೇನು?