Dengue symptoms:ಡೆಂಗ್ಯೂ ಜ್ವರ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ. ಇದು ಸೊಳ್ಳೆಗಳಿಂದ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಡೆಂಗ್ಯೂ ಜ್ವರ ಸಾಮಾನ್ಯ, ಗಂಭೀರ ಲಕ್ಷಣಗಳನ್ನು ಹೊಂದಿದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿ ಮೃತಪಡಹುದು. ಡೆಂಗ್ಯೂನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದರೆ ತುಂಬಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
''2023ರಲ್ಲಿ 7 ಸಾವಿರದ 300 ಮಂದಿ ಡೆಂಗ್ಯೂಗೆ ಬಲಿಯಾಗಿದ್ದಾರೆ'' ಎಂಬ ಆಘಾತಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ(WHO) ಬಿಡುಗಡೆ ಮಾಡಿದೆ. ''ಡೆಂಗ್ಯೂ ಸಾಮಾನ್ಯವಾಗಿ ಮಳೆಗಾಲದಲ್ಲಿ ನಿಂತ ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುತ್ತದೆ. ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ನಿಯಮಿತ ಮೇಲ್ವಿಚಾರಣೆಯೊಂದಿಗೆ ಚಿಕಿತ್ಸೆ ನೀಡಿದರೆ, ಚೇತರಿಸಿಕೊಳ್ಳುತ್ತಾರೆ'' ಎಂದು ಸಂಸ್ಥೆ ತಿಳಿಸಿದೆ. ಈಗ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದಂತೆ, ಸಾಮಾನ್ಯ ಮತ್ತು ಗಂಭೀರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.
ಡೆಂಗ್ಯೂ ಲಕ್ಷಣಗಳೇನು?: ಈಡಿಸ್ ಈಜಿಪ್ಟಿ ಸೊಳ್ಳೆ ಕಚ್ಚಿದ 4-10 ದಿನಗಳ ನಂತರ ಮಾತ್ರ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣಗಳು 1ರಿಂದ 2 ವಾರದವರೆಗೆ ಇರುತ್ತದೆ.
- ಸ್ನಾಯು ಮತ್ತು ಕೀಲು ನೋವು
- ತೀವ್ರ ತಲೆನೋವು
- ಅಧಿಕ ಜ್ವರ: ತಾಪಮಾನವು 40 ಸೆಲ್ಸಿಯಸ್ (104 F) ತಲುಪಬಹುದು.
- ಕಣ್ಣುಗಳಲ್ಲಿ ನೋವು
- ದದ್ದುಗಳು
- ವಾಕರಿಕೆ ಮತ್ತು ವಾಂತಿ
- ಗ್ರಂಥಿಗಳು ಊದಿಕೊಳ್ಳುವುದು
2ನೇ ಬಾರಿ ಡೆಂಗ್ಯೂ ಸೋಂಕಿಗೆ ಒಳಗಾದರೆ ಹೆಚ್ಚು ಅಪಾಯ: ಎರಡನೇ ಬಾರಿಗೆ ಡೆಂಗ್ಯೂ ಸೋಂಕಿಗೆ ಒಳಗಾದ ವ್ಯಕ್ತಿ ಹೆಚ್ಚಿನ ಅಪಾಯ ಹೊಂದಿರುತ್ತಾರೆ. ಅವರ ಹದಗೆಡುತ್ತಿರುವ ಆರೋಗ್ಯದ ಲಕ್ಷಣಗಳನ್ನು ಗಮನದಲ್ಲಿಸಿಕೊಂಡು ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಜ್ವರ ಕಡಿಮೆಯಾದ ನಂತರ ಕಂಡುಬರುವ ಲಕ್ಷಣಗಳಿವು.
- ಆಯಾಸ ಮತ್ತು ಚಡಪಡಿಕೆ
- ತೀವ್ರ ಹೊಟ್ಟೆ ನೋವು
- ನಿರಂತರ ವಾಂತಿ
- ತೀವ್ರ ಬಾಯಾರಿಕೆ
- ವೇಗವಾಗಿ ಉಸಿರಾಡುವುದು
- ದೌರ್ಬಲ್ಯ
- ಒಸಡುಗಳು ಅಥವಾ ಮೂಗು ರಕ್ತಸ್ರಾವ
- ವಾಂತಿ ಅಥವಾ ಮಲದಲ್ಲಿ ರಕ್ತ
- ಚರ್ಮ ತೆಳು ಮತ್ತು ತಂಪಾದಂತೆ ಭಾಸವಾಗುವುದು