ಹೈದರಾಬಾದ್:ಉತ್ತರ ಭಾರತದಲ್ಲಿ ತೀವ್ರವಾಗಿರುವ ಚಳಿಗಾಲ ಮತ್ತು ದಟ್ಟ ಮಂಜಿನ ತಾಪಮಾನವು ಜನಸಾಮಾನ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಭಾರಿ ಚಳಿಯಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಕಳೆದ 15 ದಿನಗಳಿಂದ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಈ ಸಂಬಂಧಿ ಸಮಸ್ಯೆಯಿಂದ ದಾಖಲಾಗುತ್ತಿರುವ ಪ್ರಕರಣಗಳು ದುಪ್ಪಟ್ಟಾಗಿವೆ.
ತಜ್ಞರು ಕೂಡ ಅಧಿಕ ರಕ್ತದೊತ್ತಡ, ಆರೋಗ್ಯ ಪರಿಸ್ಥಿತಿ ಕುರಿತು ಜನರು ಹೆಚ್ಚಿನ ಜಾಗೃತಿ ವಹಿಸುವಂತೆ ಕರೆ ನೀಡಿದ್ದಾರೆ. ವಯಸ್ಕರಲ್ಲಿ ಅದರಲ್ಲೂ ಹೃದಯ ರಕ್ತನಾಳ ಸಮಸ್ಯೆ ಹೊಂದಿರುವವರಲ್ಲಿ ಚಳಿ ಹವಾಮಾನ ಹೆಚ್ಚಿನ ಪರಿಣಾಮ ಬೀರುವ ಹಿನ್ನೆಲೆ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ.
ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಕಳೆದ 15 ದಿನದಿಂದ ದಿನಕ್ಕೆ 12-14 ಪಾರ್ಶ್ವವಾಯು ಮತ್ತು 20-25 ಹೃದಯಾಘಾತ ಪ್ರಕರಣಗಳು ವರದಿಯಾಗುತ್ತಿವೆ. ಸಾಮಾನ್ಯ ದಿನಕ್ಕೆ ಹೋಲಿಕೆ ಮಾಡಿದಾಗ ಈ ದಾಖಲಾತಿಗಳು ಶೇ 100ರಷ್ಟು ಹೆಚ್ಚಾಗಿವೆ.
ಸಾಮಾನ್ಯ ದಿನದಲ್ಲಿ 6-7 ಪಾರ್ಶ್ವವಾಯು ಪ್ರಕರಣಗಳು ದಾಖಲಾದರೆ, ಚಳಿ ಸಮಯದಲ್ಲಿ 12-14 ಪ್ರಕರಣಗಳ ಏರಿಕೆ ಕಂಡಿದೆ ಎಂದು ಕೆಜಿಎಂಯುನ ನರರೋಗತಜ್ಞ ಪ್ರೊ. ರವಿ ಉನಿಯಳ್ ತಿಳಿಸಿದ್ದಾರೆ.
ರಾಮ್ ಮನೋಹರ್ ಲೋಹಿಯಾ ಇನ್ಸುಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಕೂಡ ಕಳೆದೊಂದು ವಾರದಿಂದ ಹೃದಯಾಘಾತದಲ್ಲಿ ಶೇ. 8 ರಿಂದ 9 ಮತ್ತು ಪಾರ್ಶ್ವವಾಯು ಪ್ರಕರಣದಲ್ಲಿ ಶೇ. 10 ರಷ್ಟು ಏರಿಕೆ ಕಂಡಿದೆ.