ನವದೆಹಲಿ: ಬಿಸಿಲು, ಕಾಡ್ಗಿಚ್ಚು, ಪ್ರವಾಹ, ಬರ, ರೋಗಗಳು ಮತ್ತು ಸಮುದ್ರ ಮಟ್ಟ ಏರಿಕೆಯಂತಹ ಹವಾಮಾನ ಸಂಬಂಧಿತ ಸಮಸ್ಯೆಗಳು ಜಾಗತಿಕವಾಗಿ ಶಿಕ್ಷಣದ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಮತ್ತು ಈ ಸಮಸ್ಯೆಗಳಿಂದಾಗಿ ಇತ್ತೀಚಿನ ದಶಕದಲ್ಲಿ ಸಾಧಿಸಿದ ಶೈಕ್ಷಣಿಕ ಸಾಧನೆಗೆ ಹಿನ್ನಡೆಯುಂಟಾಗುತ್ತಿದೆ ಎಂದು ಜಾಗತಿಕ ಶಿಕ್ಷಣ ಮೇಲ್ವಿಚಾರಣಾ ವರದಿ (Global Education Monitoring Report -ಜಿಇಎಂ) ತಿಳಿಸಿದೆ.
ಯುನೆಸ್ಕೋ, ಮಾನಿಟರಿಂಗ್ ಅಂಡ್ ಇವಾಲ್ಯುಯೇಷನ್ ಕ್ಲೈಮೇಟ್ ಕಮ್ಯುನಿಕೇಷನ್ ಅಂಡ್ ಎಜುಕೇಶನ್ (ಎಂಇಸಿಸಿಇ) ಯೋಜನೆ ಮತ್ತು ಕೆನಡಾದ ಸಸ್ಕಾಚೆವಾನ್ ವಿಶ್ವವಿದ್ಯಾಲಯ ಸಂಗ್ರಹಿಸಿದ ಜಾಗತಿಕ ವರದಿಯ ಪ್ರಕಾರ- ವಿಶ್ವದ ಬಹುತೇಕ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಪ್ರತಿವರ್ಷ ಪ್ರತಿಕೂಲ ಹವಾಮಾನಗಳಿಂದಾಗಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದು ಕಲಿಕೆಯ ನಷ್ಟ ಮತ್ತು ಮಕ್ಕಳು ಶಾಲೆಯಿಂದ ಹೊರಗುಳಿಯುವ ಪ್ರಮಾಣಗಳನ್ನು ಹೆಚ್ಚಿಸುತ್ತದೆ ಎಂದು ಗಮನಸೆಳೆದಿದೆ.
"ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳು ಈಗಾಗಲೇ ಶೈಕ್ಷಣಿಕ ವ್ಯವಸ್ಥೆ ಮತ್ತು ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತಿವೆ. ನೇರ ಪರಿಣಾಮಗಳಲ್ಲಿ ಶಿಕ್ಷಣ ಮೂಲಸೌಕರ್ಯಗಳ ನಾಶ ಮತ್ತು ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಸಿಬ್ಬಂದಿಗೆ ಗಾಯವಾಗುವುದು ಮತ್ತು ಪ್ರಾಣಹಾನಿ ಸೇರಿವೆ. ಹವಾಮಾನ ಬದಲಾವಣೆಯಿಂದ ಜನರ ಸ್ಥಳಾಂತರ, ಜನರ ಜೀವನೋಪಾಯ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದು, ಇದರಿಂದ ಪರೋಕ್ಷವಾಗಿ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಕಾಣಿಸಿಕೊಳ್ಳುತ್ತಿದೆ" ಎಂದು ವರದಿ ಹೇಳಿದೆ.
"ಕಳೆದ 20 ವರ್ಷಗಳಲ್ಲಿ, ಹವಾಮಾನ ವೈಪರೀತ್ಯದಿಂದಾಗಿ ಕನಿಷ್ಠ 75 ಪ್ರತಿಶತದಷ್ಟು ಘಟನೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಇದು ಐದು ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಪ್ರವಾಹ ಮತ್ತು ಚಂಡಮಾರುತಗಳು ಸೇರಿದಂತೆ ಆಗಾಗ ಸಂಭವಿಸುವ ನೈಸರ್ಗಿಕ ವಿಪತ್ತುಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾವಿಗೆ ಕಾರಣವಾಗಿವೆ ಮತ್ತು ಶಾಲೆಗಳನ್ನು ಹಾನಿಗೊಳಿಸಿವೆ" ಎಂದು ವರದಿ ತಿಳಿಸಿದೆ.
"ತೀವ್ರ ಶಾಖದ ಪರಿಸ್ಥಿತಿಗಳು ಮಕ್ಕಳ ಶೈಕ್ಷಣಿಕ ಫಲಿತಾಂಶಗಳ ಮೇಲೆ ಗಮನಾರ್ಹ ಹಾನಿಕಾರಕ ಪರಿಣಾಮ ಬೀರುತ್ತವೆ. 1969 ಮತ್ತು 2012 ರ ನಡುವೆ 29 ದೇಶಗಳಲ್ಲಿನ ಜನಗಣತಿ ಮತ್ತು ಹವಾಮಾನ ದತ್ತಾಂಶವನ್ನು ಸಂಪರ್ಕಿಸುವ ವಿಶ್ಲೇಷಣೆಯು ಪ್ರಸವಪೂರ್ವ ಮತ್ತು ಆರಂಭಿಕ ಜೀವನದ ಅವಧಿಯಲ್ಲಿ ಸರಾಸರಿಗಿಂತ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಳ್ಳುವುದು ಕಡಿಮೆ ವರ್ಷಗಳ ಶಾಲಾ ಶಿಕ್ಷಣದೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಿದೆ. ಈ ಪರಿಣಾಮ ವಿಶೇಷವಾಗಿ ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿದೆ" ಎಂದು ಅದು ಹೇಳಿದೆ.
ಸರಾಸರಿಗಿಂತ ಎರಡು ಅಂಶ ಹೆಚ್ಚಿನ ಶಾಖದ ಪರಿಸ್ಥಿತಿಗಳನ್ನು ಅನುಭವಿಸುವ ಮಗುವು ಸರಾಸರಿ ತಾಪಮಾನವನ್ನು ಅನುಭವಿಸುವ ಮಕ್ಕಳಿಗಿಂತ 1.5 ಕಡಿಮೆ ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುತ್ತದೆ ಎಂದು ಜಿಇಎಂ ವರದಿ ಗಮನಿಸಿದೆ.
"ಹೆಚ್ಚಿನ ತಾಪಮಾನವು ಚೀನಾದಲ್ಲಿ ಉನ್ನತ ಮಟ್ಟದ ಪರೀಕ್ಷಾ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಿದೆ ಮತ್ತು ಪ್ರೌಢಶಾಲಾ ಪದವಿ ಮತ್ತು ಕಾಲೇಜು ಪ್ರವೇಶ ದರಗಳಲ್ಲಿ ಕಡಿತಕ್ಕೆ ಕಾರಣವಾಗಿದೆ. ಹಾಗೆಯೇ ಯುನೈಟೆಡ್ ಸ್ಟೇಟ್ಸ್ನಲ್ಲಿ ಹವಾನಿಯಂತ್ರಣ ವ್ಯವಸ್ಥೆಯಿಲ್ಲದ ಮಗುವೊಂದು ತನ್ನ ಶಾಲಾ ವರ್ಷದಲ್ಲಿ 1 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚು ಬಿಸಿಯನ್ನು ಅನುಭವಿಸುವಂತಾಗಿದ್ದು, ಇದರಿಂದ ಆ ಮಗುವಿನ ಪರೀಕ್ಷಾ ಅಂಕಗಳು ಶೇಕಡಾ 1 ರಷ್ಟು ಕಡಿಮೆಯಾಗಿವೆ" ಎಂದು ವರದು ಹೇಳಿದೆ.
"ಇಷ್ಟಾದರೂ ಬಿಸಿ ಹವಾಮಾನದಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿಯ ಮಟ್ಟ ಬಹಳ ಕಡಿಮೆ ಇದೆ. 28 ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ 94 ಶಿಕ್ಷಣ ನೀತಿ ನಿರೂಪಕರ ಇತ್ತೀಚಿನ ಸಮೀಕ್ಷೆಯಲ್ಲಿ, ಅರ್ಧದಷ್ಟು ಜನರು ಮಾತ್ರ ಬಿಸಿಯಾದ ತಾಪಮಾನವು ಕಲಿಕೆಗೆ ಅಡ್ಡಿಯಾಗಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಇದರಲ್ಲಿ ಶೇ 61ರಷ್ಟು ನೀತಿ ನಿರೂಪಕರು ಹವಾಮಾನ ಬದಲಾವಣೆಯನ್ನು ಶಿಕ್ಷಣದ 10 ಆದ್ಯತೆಗಳಲ್ಲಿ ಕೊನೆಯ ಮೂರು ಆದ್ಯತೆಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ." ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಎಂಥಾ ಐಡಿಯಾ ಇದು ಗುರು!; ಅಡುಗೆ ಮನೆಯ ಗೋಡೆಗಳ ಮೇಲೆ ಹಠಮಾರಿ ಎಣ್ಣೆ ಕಲೆಗಳಿವೆಯೇ?: ಈ ಟಿಪ್ಸ್ ಪಾಲಿಸಿ ಸಾಕು ಕಲೆಗಳು ಮಾಯ! - Tips to Remove Oil Stains on Walls