ಕರ್ನಾಟಕ

karnataka

ETV Bharat / health

ತುರ್ತು ರಕ್ತ ಲಭ್ಯತೆಗಾಗಿ ಸ್ಪಷ್ಟ ರಾಷ್ಟ್ರೀಯ ರಕ್ತದಾನ ಕಾನೂನು ಅಗತ್ಯ: ತಜ್ಞರ ಅಭಿಮತ - national blood law

ಅಗತ್ಯ ಸಂದರ್ಭಗಳಲ್ಲಿ ಸುರಕ್ಷಿತ ರಕ್ತ ಲಭ್ಯವಾಗುವಂತೆ ಮಾಡಲು ಇದಕ್ಕಾಗಿ ರಾಷ್ಟ್ರೀಯ ರಕ್ತ ಕಾನೂನು ರೂಪಿಸಬೇಕೆಂದು ತಜ್ಞರು ಹೇಳಿದ್ದಾರೆ.

ರಕ್ತದಾನದ ಒಂದು ದೃಶ್ಯ
ರಕ್ತದಾನದ ಒಂದು ದೃಶ್ಯ (IANS (ಸಂಗ್ರಹ ಚಿತ್ರ))

By ETV Bharat Karnataka Team

Published : Jun 14, 2024, 3:34 PM IST

ನವದೆಹಲಿ: ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅಗತ್ಯವಿದ್ದಾಗ ಸಾಧ್ಯವಾದಷ್ಟು ಸುರಕ್ಷಿತವಾದ ರಕ್ತ ಸಿಗುವಂತೆ ಮಾಡಲು ಸ್ಪಷ್ಟವಾದ ರಾಷ್ಟ್ರೀಯ ರಕ್ತ ನೀತಿಯನ್ನು ರೂಪಿಸುವುದು ಅಗತ್ಯವಿದೆ ಎಂದು ವಿಶ್ವ ರಕ್ತದಾನಿಗಳ ದಿನದಂದು ತಜ್ಞರು ಶುಕ್ರವಾರ ಹೇಳಿದ್ದಾರೆ. ಈ ವಲಯದಲ್ಲಿನ ಎಲ್ಲಾ ಭಾಗೀದಾರರನ್ನು ಒಳಗೊಂಡು ಹೊಸ ನೀತಿಯನ್ನು ರೂಪಿಸುವಂತೆ ಅವರು ಕರೆ ನೀಡಿದ್ದಾರೆ.

ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಸ್ವಯಂಪ್ರೇರಣೆಯಿಂದ ಮತ್ತು ಹಣ ಪಡೆಯದೆ ರಕ್ತದಾನ ಮಾಡುವ ಹಾಗೂ ಆ ಮೂಲಕ ಜೀವದಾನ ಮಾಡುವ ಜನರನ್ನು ಗೌರವಿಸಲು ಮತ್ತು ಧನ್ಯವಾದ ಹೇಳಲು ಈ ದಿನ ಆಚರಿಸಲಾಗುತ್ತದೆ.

ರಕ್ತದಾನದ ಬಗ್ಗೆ ಮಾತನಾಡಿದ ಗುರುಗ್ರಾಮದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ ಸ್ಟಿಟ್ಯೂಟ್​ನ ಪ್ರಧಾನ ನಿರ್ದೇಶಕ ಮತ್ತು ಮುಖ್ಯ ಬಿಎಂಟಿ ರಾಹುಲ್ ಭಾರ್ಗವ, ರಕ್ತ ಬ್ಯಾಂಕ್ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ರಕ್ತದಾನಿಗಳ ರಕ್ತದ ಸೋಂಕಿನ ಪರೀಕ್ಷಾ ವಿಧಾನಗಳನ್ನು ಸುಧಾರಿಸುವುದರಿಂದ ಸಂಭಾವ್ಯ ಸಮಸ್ಯೆಗಳನ್ನು ಬೇಗನೆ ಪರಿಹರಿಸಲು ಅನುಕೂಲವಾಗುತ್ತದೆ ಎಂದರು.

"ಸ್ವಯಂಪ್ರೇರಿತ ದಾನವನ್ನು ಪ್ರೋತ್ಸಾಹಿಸುವುದು, ರಕ್ತದಾನ ಮತ್ತು ಸುರಕ್ಷಿತ ರಕ್ತದ ಲಭ್ಯತೆಗೆ ಕಟ್ಟುನಿಟ್ಟಾದ ದಾನಿಗಳ ಸ್ಕ್ರೀನಿಂಗ್ ಪರೀಕ್ಷೆಗಳು ಅತ್ಯಗತ್ಯ" ಎಂದು ಭಾರ್ಗವ ಐಎಎನ್ಎಸ್​ಗೆ ತಿಳಿಸಿದರು.

ರಕ್ತ ಮತ್ತು ರಕ್ತ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಏಕರೂಪದ ಮಾನದಂಡಗಳನ್ನು ಅನುಷ್ಠಾನಗೊಳಿಸಲು ಮತ್ತು ಸ್ಥಿರತೆಯನ್ನು ಉತ್ತೇಜಿಸಲು ರಾಷ್ಟ್ರೀಯ ರಕ್ತದಾನ ನೀತಿಯನ್ನು ಶಾಸನಾತ್ಮಕ ಚೌಕಟ್ಟಿನಿಂದ ನಿಯಂತ್ರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ.

2018 ರಲ್ಲಿ, ರಕ್ತದಾನದ ಬಗ್ಗೆ ವರದಿ ನೀಡುವ ದೇಶಗಳ ಪೈಕಿ ಶೇ 73 ರಷ್ಟು ಅಥವಾ 171 ರಾಷ್ಟ್ರಗಳ ಪೈಕಿ 125 ದೇಶಗಳು ರಾಷ್ಟ್ರೀಯ ರಕ್ತ ನೀತಿಯನ್ನು ಹೊಂದಿವೆ. ಅಂದರೆ ಒಟ್ಟಾರೆಯಾಗಿ ರಕ್ತ ನೀತಿಯ ಬಗ್ಗೆ ವರದಿ ಸಲ್ಲಿಸುವ ದೇಶಗಳ ಪೈಕಿ ಶೇ 66 ರಷ್ಟು ಅಥವಾ 171 ರಲ್ಲಿ 113 ದೇಶಗಳು ರಕ್ತ ವರ್ಗಾವಣೆಯ ಸುರಕ್ಷತೆ ಮತ್ತು ಗುಣಮಟ್ಟವನ್ನು ಒಳಗೊಂಡ ನಿರ್ದಿಷ್ಟ ಕಾನೂನುಗಳನ್ನು ಹೊಂದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ತಿಳಿಸಿವೆ.

ತಜ್ಞರ ಪ್ರಕಾರ ರಕ್ತಪೂರಣದಿಂದ ಹರಡುವ ಸೋಂಕುಗಳನ್ನು (ಟಿಟಿಐ) ತಡೆಗಟ್ಟಲು ಮಲೇರಿಯಾ, ಎಚ್ಐವಿ, ಹೆಪಟೈಟಿಸ್ ಬಿ ಮತ್ತು ಸಿ ಮತ್ತು ಸಿಫಿಲಿಸ್ನಂತಹ ಸಾಂಕ್ರಾಮಿಕ ಸೋಂಕುಗಳನ್ನು ಪರೀಕ್ಷಿಸುವುದು ಮುಖ್ಯವಾಗಿದೆ. ಹೆಚ್ಚುವರಿಯಾಗಿ, ಪ್ರತಿರಕ್ಷಣಾ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಗಳ ಹೊಂದಾಣಿಕೆ, ಪ್ರತಿಕಾಯ ಸ್ಕ್ರೀನಿಂಗ್ ಮತ್ತು ಕ್ರಾಸ್ ಮ್ಯಾಚಿಂಗ್ ಮಾಡುವುದು ನಿರ್ಣಾಯಕವಾಗಿದೆ. ಇದರಿಂದಾಗಿ ರಕ್ತ ವರ್ಗಾವಣೆ ಸಮಯದಲ್ಲಿ ಎದುರಾಗಬಹುದಾದ ಹಿಮೋಲಿಟಿಕ್ ಮತ್ತು ಇತರ ಸಮಸ್ಯೆಗಳನ್ನು ತಡೆಗಟ್ಟಬಹುದು.

"ರಕ್ತ ಸಂಗ್ರಹಣಾ ಸೇವೆಗಳ ನಿಯಂತ್ರಕ ಕಾನೂನುಗಳನ್ನು ರಕ್ತ ಸಂಗ್ರಹ ಹೆಸರಿನ ಒಂದೇ ಶಾಸನದ ಅಡಿಯಲ್ಲಿ ಕ್ರೋಢೀಕರಿಸಲು ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ. ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಿಂದ ರಕ್ತವನ್ನು ಹೊರತರಬೇಕು ಮತ್ತು ರಕ್ತ ಬ್ಯಾಂಕುಗಳ ಪರವಾನಗಿಯನ್ನು ಮೀರಿ ಈ ಕಾನೂನು ಸಮಗ್ರ ವಿಷಯಗಳನ್ನು ಒಳಗೊಂಡಿರಬೇಕು" ಎಂದು ಥಲಸ್ಸೆಮಿಯಾ ರೋಗಿಗಳ ಪರವಾಗಿ ಕೆಲಸ ಮಾಡುವ ಸ್ವಯಂ ಸೇವಾ ಸಂಘಟನೆಯ ಸದಸ್ಯ ಕಾರ್ಯದರ್ಶಿ ಅನುಭಾ ತನೇಜಾ ಮುಖರ್ಜಿ ಹೇಳಿದರು.

ಇದನ್ನೂ ಓದಿ : ತಾಪಮಾನ ಏರಿಕೆಗೆ ಕಾರಣವಾಗುವ ನೈಟ್ರಸ್ ಆಕ್ಸೈಡ್ ಹೊರಸೂಸುವಿಕೆ ಶೇ 40ರಷ್ಟು ಹೆಚ್ಚಳ: ವರದಿ - nitrous oxide emissions

ABOUT THE AUTHOR

...view details