ನವದೆಹಲಿ: ಅಟೆನ್ಶನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಅಂದರೆ ಚಂಚಲತೆ ಮತ್ತು ಅತಿಯಾದ ಚಟುವಟಿಕೆಯಿಂದ ಇರುವುದು. 3ರಿಂದ 5 ವರ್ಷದ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ನರ ಸಂಬಂಧಿತ ಆರೋಗ್ಯ ಸಮಸ್ಯೆ ಇದಾಗಿದೆ. ಈ ಸಮಸ್ಯೆಯ ನಿವಾರಣೆಗೆ ಔಷಧದೊಂದಿಗೆ ಮಾನಸಿಕ ಚಿಕಿತ್ಸೆಯೂ ಅವಶ್ಯಕತೆಯೂ ಇದೆ ಎಂದು ಅಧ್ಯಯನ ತಿಳಿಸಿದೆ.
ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಸಂಶೋಧಕರು ಎಡಿಎಚ್‌ಡಿ ಕುರಿತು 23,000ಕ್ಕೂ ಹೆಚ್ಚು ಅಧ್ಯಯನಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂಶೋಧನೆಯ ಫಲಿತಾಂಶವನ್ನು ಪೀಡಿಯಾಟ್ರಿಕ್ಸ್ ಜರ್ನಲ್‌ನಲ್ಲಿ ಎರಡು ಕಂಪ್ಯಾನಿಯನ್ ಪೇಪರ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಎಡಿಎಚ್‌ಡಿ ಪತ್ತೆ ಮತ್ತು ಚಿಕಿತ್ಸೆಯ ಪರಿಣಾಮಕಾರಿ ಮಾದರಿಯನ್ನು ಬಹಿರಂಗಪಡಿಸಲಾಗಿದೆ. ಇದರ ಜತೆಗೆ ಕಾಲಾನಂತರದಲ್ಲಿ ಈ ಸಮಸ್ಯೆಯ ನಿರ್ವಹಣೆಯ ಪ್ರಗತಿ ಕುರಿತು ಕೂಡ ವಿಮರ್ಶೆ ನಡೆದಿದೆ.
ಎಡಿಎಚ್‌ಡಿ ಕುರಿತು ಸಾಕ್ಷ್ಯ ಆಧಾರಿತ ಮಾಹಿತಿಯನ್ನು ಶಿಕ್ಷಕರು, ಪೋಷಕರು ಹೊಂದುವ ಅಗತ್ಯವಿದೆ. ನಾವು ದೃಢವಾದ ವಿಮರ್ಶೆ ಮಾಡಿದ್ದೇವೆ. ಇದು ನಮಗೆ ಬಲವಾದ ಸಾಕ್ಷ್ಯ ನೀಡಿದೆ ಎಂದು ಯುಎಸ್ಸಿಯ ಕೆಕ್ ಸ್ಕೂಲ್ನ ಪ್ರೊ.ಸುಸಾನೆ ಹೆಂಪೆಲ್ ತಿಳಿಸಿದ್ದಾರೆ.
ಸದ್ಯ ಎಡಿಎಚ್‌ಡಿ ಸಮಸ್ಯೆಯನ್ನು ಮಕ್ಕಳಲ್ಲಿ ಪತ್ತೆ ಮಾಡಲು ಅನೇಕ ಸಾಧನಗಳ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಪೋಷಕರು ಮತ್ತು ಶಿಕ್ಷಕರ ರೇಟಿಂಗ್ ಸ್ಕೇಲ್, ರೋಗಿಯ ಸ್ವಯಂ ವರದಿ, ನರ ಮಾನಸಿಕ ಸಮಸ್ಯೆ, ಇಇಜಿ ವಿಧಾನ, ಬಯೋಮಾರ್ಕ್ಸ್, ಚಟುವಟಿಕೆಯ ನಿರ್ವಹಣೆ ಮತ್ತು ವೀಕ್ಷಣೆ ಮಾಡಲಾಗುತ್ತದೆ.