ಲಂಡನ್: ಚಿಕೂನ್‌ಗುನ್ಯಾದಿಂದ ಬಾಧಿತರಾದವರು ಸೋಂಕಿನ ಚೇತರಿಕೆಯ ನಂತರದ ಮೂರು ತಿಂಗಳ ಬಳಿಕವೂ ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಕುರಿತ ಅಧ್ಯಯನ ವರದಿಯನ್ನು 'ದಿ ಲ್ಯಾನ್ಸೆಟ್ ಇನ್ಫೆಕ್ಷಸ್ ಡಿಸೀಸ್'ನಲ್ಲಿ ಪ್ರಕಟಿಸಲಾಗಿದೆ.
ಏನಿದು ಚಿಕುನ್‌ಗುನ್ಯಾ?: ಚಿಕೂನ್‌ಗುನ್ಯಾ ಎಂಬುದು ಒಂದು ವೈರಲ್ ಸೋಂಕು. ಸೊಳ್ಳೆ ಕಡಿತದಿಂದ ಮನುಷ್ಯರಿಗೆ ಹರಡುತ್ತದೆ. ಈಡಿಸ್ ಈಜಿಪ್ಟಿ ಮತ್ತು ಏಡಿಸ್ ಅಲ್ಬೋಪಿಕ್ಟಸ್ ಸೊಳ್ಳೆಗಳು ಈ ಸೋಂಕು ಹೊತ್ತು ತರುತ್ತವೆ. ಸಾಮಾನ್ಯವಾಗಿ ಇದನ್ನು ಯೆಲ್ಲೋ ಫೀವರ್ ಮತ್ತು ಟೈಗರ್ ಸೊಳ್ಳೆ ಎಂದೂ ಕೂಡ ಕರೆಯಲಾಗುತ್ತದೆ.
ಅಧ್ಯಯನ ವರದಿ: ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರೋಫಿಕಲ್ ಮೆಡಿಸಿನ್ ಸಂಶೋಧಕರು ಸೇರಿದಂತೆ ಅಧ್ಯಯನ ತಂಡವು ಚಿಕುನ್ ಗುನ್ಯಾ ಸೋಂಕು ಹೊಂದಿರುವ 1,50,000 ಜನರ ದತ್ತಾಂಶವನ್ನು ವಿಶ್ಲೇಷಿಸಿದೆ. ಅಧ್ಯಯನದ ಫಲಿತಾಂಶದಲ್ಲಿ ಈ ರೀತಿಯ ಸೋಂಕಿಗೆ ಒಳಗಾದ ಜನರು ಸೋಂಕಿನಿಂದ ಚೇತರಿಕೆಯಾದ ಬಳಿಕವೂ ಪ್ರಾಣಾಪಾಯ ಹೊಂದಿರುವುದು ಕಂಡುಬಂದಿದೆ.
ಸೋಂಕಿಗೊಳಗಾದ ಮೊದಲ ವಾರದಲ್ಲಿ ಸೋಂಕಿತರಿಗೆ ಸಾವಿನ ಅಪಾಯ ಶೇ.8ರಷ್ಟಿದ್ದರೆ, ಸೋಂಕಿನ ಮೂರು ತಿಂಗಳ ಬಳಿಕವೂ ಹೃದಯ ಮತ್ತು ಕಿಡ್ನಿ ಅಪಾಯದಿಂದ ಸಾವನ್ನಪ್ಪುವ ದರ ದುಪ್ಪಟ್ಟಿದೆ ಎಂದು ಅಧ್ಯಯನ ಹೇಳುತ್ತದೆ. ಅಧ್ಯಯನಕಾರರ ತಂಡವು ಹೃದಯ ರಕ್ತನಾಳದ ಸಮಸ್ಯೆಯಿಂದ ರೋಗಿ ಸಾವನ್ನಪ್ಪುವ ಅಪಾಯ ಹೆಚ್ಚಿರುತ್ತದೆ. ಇದರ ಜೊತೆಗೆ ಸೋಂಕಿತ ವ್ಯಕ್ತಿಯ ಗುಂಪು ಮತ್ತು ಲಿಂಗದ ಆಧಾರದ ಮೇಲೆ ಕಿಡ್ನಿ ಸಮಸ್ಯೆ ಅಪಾಯವನ್ನೂ ಹೊಂದಿದ್ದಾರೆ ಎಂದು ತಿಳಿಸಿದೆ.