ನವದೆಹಲಿ: 2050ರ ಹೊತ್ತಿಗೆ ಮೂರನೇ ಒಂದು ಭಾಗದಷ್ಟು ಜಾಗತಿಕ ನದಿ ಜಲಾಯನಯನ ಪ್ರದೇಶದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ. ಇದಕ್ಕೆ ಕಾರಣ ನೈಟ್ರೊಜನ್ (ಸಾರಜನಕ) ಮಾಲಿನ್ಯ ಆಗಿರಲಿದೆ ಎಂದು ನೆದರ್ಲ್ಯಾಂಡ್ ಸಂಶೋಧಕರ ತಂಡ ತಿಳಿಸಿದೆ. ಇದಕ್ಕಾಗಿ ತಂಡವು ಜಗತ್ತಿನೆಲ್ಲೆಡೆಯ 10 ಸಾವಿರ ಉಪ ಜಲಾನಯನ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದೆ. ಈ ವೇಳೆ ಕೃಷಿ ಮತ್ತು ನಗರ ವಿಸ್ತರಣೆಯು ನದಿ ನೀರಿನಲ್ಲಿನ ನೈಟ್ರೋಜನ್ ಹೆಚ್ಚಳಕ್ಕೆ ಕಾರಣವಾಗಿದೆ ಅನ್ನೋದು ಪತ್ತೆಯಾಗಿದೆ.
ಜಗತ್ತಿನ ಜನಸಂಖ್ಯೆಯ ಶೇ 80ರಷ್ಟು ಮಂದಿಯು ಪ್ರಮುಖ ನದಿಗಳ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮಾನವ ತ್ಯಾಜ್ಯಗಳಿಂದ ನೆಟ್ರೋಜನ್ ಮಾಲಿನ್ಯಕ್ಕೆ ಶೇ 84ರಷ್ಟು ಕೊಡುಗೆಯನ್ನು ಅವರು ನೀಡುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಸಂಶೋಧಕರು ತಿಳಿಸುವಂತೆ, ಸಾರಜನಕಯುಕ್ತ ರಸಗೊಬ್ಬರ ಕೃಷಿ ನೀರು ಮತ್ತು ನಗರದಲ್ಲಿ ಹರಿಯುವ ಕೊಳಚೆ ನೀರು ಈ ಉಪಜಲಾನಯ ಪ್ರದೇಶದ ನೀರನ್ನು ಕಲುಷಿತ ಮಾಡಿದೆ. ಆದಾಗ್ಯೂ ನೈಟ್ರೋಜನ್ ಎಂಬುದು ಗಿಡ ಮತ್ತು ಪ್ರಾಣಿಗಳಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಈ ಮಟ್ಟ ಮೀರಿದಾಗ ನೀರಿನಲ್ಲಿ ಆಲ್ಗೆಗಳು ಬೆಳೆದು ಅವು ಪರಿಸರಕ್ಕೆ ಹಾನಿ ಮಾಡುತ್ತದೆ. ಇದು ಶುದ್ಧ ನೀರಿನ ಲಭ್ಯತೆ ಮೇಲೆ ಪರಿಣಾಮ ಬೀರುತ್ತದೆ.