ಕೂದಲು ಉದುರುವಿಕೆಯು ಸಮಸ್ಯೆಗಿಂತ ದೊಡ್ಡ ಕಾಯಿಲೆಯಾಗಿ ಜನರನ್ನು ಅದರಲ್ಲೂ ಯುವಕರನ್ನು ಹೆಚ್ಚಾಗಿ ಕಾಡುತ್ತಿದೆ. ಆಹಾರದಲ್ಲಿನ ಕೊರತೆ, ಮಾನಸಿಕ-ದೈಹಿಕ ಒತ್ತಡ, ಗಡಸು ನೀರು, ನಿದ್ರೆಯ ಕೊರತೆ, ಕೆಲವರಿಗೆ ಅನುವಂಶೀಯ.. ಕಾರಣ ಹಲವು ಆದರೆ ಇವೆಲ್ಲವುಗಳು ಪರಿಣಾಮ ಬೀರುವುದೇ ನಮ್ಮ ತಲೆಯ ಕೂದಲಿನ ಮೇಲೆ.
ಯುವ ಜನತೆ ಸಂಪಾದನೆಗಾಗಿ ಮನೆ ಬಿಟ್ಟು ಬೇರೆ ರಾಜ್ಯಗಳಿಗೆ ತೆರಳಿ ದುಡಿಯಲಾರಂಭಿಸಿದರೆ ಹಣವನ್ನು ಕೂಡಿಡುವುದಕ್ಕಿಂತ ಉದುರುತ್ತಿರುವ ಕೂದಲನು ಹಿಡಿದಿಡಲು ವಿವಿಧ ಕಂಪನಿಯ ಶ್ಯಾಂಪು, ಕಂಡೀಷನರ್, ಸೀರಮ್ಗಾಗಿ ಮಾಡುವ ಖರ್ಚೇ ಅಧಿಕವಾಗಿದೆ. ಇಷ್ಟೆಲ್ಲಾ ಮಾಡಿದರೂ ಕೂದಲು ಮಾತ್ರ ತಲೆ ಬಿಟ್ಟು ಹೆಗಲ ಮೇಲೆ ಜಾಸ್ತಿ ಕಾಣಿಸುತ್ತಿದೆ.
ಹಾಗಾದರೇ ಕೂದಲು ಸಮಸ್ಯೆಗೆ ಶಾಶ್ವತ ಪರಿಹಾರವೇ ಇಲ್ಲವೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಪರಿಹಾರ ಇದೆ. ಆದರೆ, ಒಂದೇ ರಾತ್ರಿ ಯಾವ ಸಮಸ್ಯೆಯೂ ಮಾಯವಾಗುವುದಿಲ್ಲ. ನಿಮ್ಮೆಲ್ಲ ಟೆನ್ಶನ್ನ್ನು ಬದಿಗಿಟ್ಟು ಸ್ವಲ್ಪ ತಾಳ್ಮೆಯಿಂದ ನಾವು ಕೊಡುವ ಸಲಹೆ ಕೇಳಿ. ಖಂಡಿತ ನಿಮ್ಮ ಕೂದಲು ಉದರುವಿಕೆ, ಡ್ಯಾಂಡ್ರಫ್, ಬಿಳಿ ಕೂದಲು ಎಲ್ಲವೂ ನಿಂತು ದಟ್ಟವಾದ, ಗಟ್ಟಿಯಾದ ಆರೋಗ್ಯಯುತ ಕೇಶರಾಶಿ ನಿಮ್ಮದಾಗಿಸಿಕೊಳ್ಳಬಹುದು.
ಇಲ್ಲಿ ನೀವು ಪರಿಹಾರಕ್ಕಿಂದ ಮೊದಲು ಈ ವಿಚಾರವನ್ನು ಮನದಟ್ಟು ಮಾಡಿಕೊಳ್ಳಿ. ಕೇವಲ ಬಾಹ್ಯದಿಂದ ಯಾವುದೇ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಹೇರ್ಫಾಲ್ ನಿಲ್ಲುವುದಿಲ್ಲ. ಮೊದಲು ನಿಮ್ಮ ಆಂತರಿಕ ದೇಹವನ್ನು ಪೋಷಿಸಬೇಕು. ಅಂದರೆ ನಿಮ್ಮ ಹೊಟ್ಟೆಗೆ ಪೌಷ್ಟಿಕಾಂಶ ನೀಡಬೇಕು. ಜ್ವರ ಬಂದಾಗ ನಿಮ್ಮ ದೇಹದ ಹೊರ ಭಾಗಕ್ಕೆ ಮುಲಾಮು ಹಚ್ಚಿದರೇ ಜ್ವರ ತಗ್ಗುತ್ತದೆಯೆ? ಇಲ್ಲ ತಾನೇ! ಬದಲಿಗೆ ಗುಳಿಗೆ ನುಂಗಿದಾಗ ಮಾತ್ರ ದೇಹದ ಒಳಗಿನಿಂದ ನಿಮ್ಮ ಕಾಯಿಲೆ ಗುಣವಾಗುತ್ತಾ ಬರುತ್ತದೆ. ಹೀಗೆಯೇ ಕೂದಲಿನ ಪೋಷಣೆಗೆ ಉತ್ತಮ ಆಹಾರ ತೆಗೆದುಕೊಳ್ಳಬೇಕು. ಆ ಆಹಾರದ ಅಂಶಗಳು ರಕ್ತದಲ್ಲಿ ಸೇರಿ ಒಳಗಿನಿಂದಲೇ ನಿಮ್ಮ ಕೂದಲಿನ ಬುಡಕ್ಕೆ ಬೇಕಾದ ಅಗತ್ಯಗಳನ್ನು ಪೂರೈಸುತ್ತದೆ. ಇದನ್ನು ನಾವಲ್ಲ ತಜ್ಞ ವೈದ್ಯರು ಸಂಶೋಧನೆ ನಡೆಸಿ ತಿಳಿಸಿದ್ದಾರೆ. ಖ್ಯಾತ ಪೌಷ್ಟಿಕತಜ್ಞರಾದ ಡಾ.ಲತಾಶಶಿ ಸೂಚಿಸಿರುವ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ.
ಈ ತರಹದ ಆಹಾರ ಸೇವನೆ ಮಾಡಿ:ನಿತ್ಯದ ಆಹಾರದಲ್ಲಿ ಸತು, ಕಬ್ಬಿಣ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಸೆಲೆನಿಯಂನಂತಹ ಪೋಷಕಾಂಶಗಳು ಇರಲೇಬೇಕು. ಇವುಗಳು ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಬ್ಬಿಣ ಅಂಶಕ್ಕಾಗಿ ಹಸಿರು ಸೊಪ್ಪುಗಳು, ಇಂಗು, ಕೊತ್ತಂಬರಿ ಸೊಪ್ಪು, ಪುದೀನಾ, ಕರಿಬೇವಿನ ಸೊಪ್ಪು ಮತ್ತು ಜೀರಿಗೆಯು ನಿಮ್ಮ ದೇಹವನ್ನು ಸೇರಬೇಕು.