ಹೈದರಾಬಾದ್:ರಸ್ತೆ ಅಪಘಾತದಲ್ಲಿ ಬ್ರೈನ್ ಡೆಡ್ ಆದ ಯುವಕನ ಹೃದಯ ಸೇರಿದಂತೆ ವಿವಿಧ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದು, ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ತೆಲಂಗಾಣದ 21 ವರ್ಷದ ಯುವಕನ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಆತನ ಮಿದುಳು ನಿಷ್ಕ್ರಿಯಗೊಂಡಿತ್ತು. ಆದರೆ, ಆತನ ಹೃದಯ ಬಡಿತ ಇನ್ನು ನಿಂತಿರಲಿಲ್ಲ. ಈ ವೇಳೆ ಈತನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ. ಇದೀಗ ಆತನ ಹೃದಯವನ್ನು ಮುಳುಗು ಜಿಲ್ಲೆಯ ಏತೂರುನಗರದ 29 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.
ಹಸಿರು ಮಾರ್ಗದ ಮೂಲಕ ಹೃದಯ ರವಾನೆ: ಜೀವನಂದನ್ ಎಂಬ ತೆಲಂಗಾಣದ ಯುವಕ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಈ ವೇಳೆ ಆತನನ್ನು ಸಿಂಕದ್ರಾಬಾದ್ನ ಯಶೋಧ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಯುವಕನ ಮಿದುಳು ನಿಷ್ಕ್ರಿಯವಾಗಿದ್ದರಿಂದ ಆತ ಬುದುಕುಳಿಯುವುದು ಸಾಧ್ಯವಿಲ್ಲ ಎಂಬುದು ಅರಿವಿಗೆ ಬಂದಿತ್ತು. ಹೀಗಾಗಿ ಆತನ ಹೃದಯ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ.
ಇದೇ ಸಂದರ್ಭದಲ್ಲಿ ಡೈಲೇಟೆಡ್ ಕಾರ್ಡಿಯೊಪತಿ ಎಂಬ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಶೇಖ್ ಶಹನಾಸ್ (29) ಎಂಬ ವ್ಯಕ್ತಿ, ತನಗೆ ಹೃದಯ ಕಸಿ ಮಾಡಿಸಿಕೊಳ್ಳುವುದಕ್ಕೋಸ್ಕರ ಅಂಗಾಂಗಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದ. ಇದೇ ವೇಳೆ ಜೀವನಂದನ್ ಪೋಷಕರು ಆತನ ಅಂಗಾಂಗ ದಾನಕ್ಕೆ ಮುಂದಾಗಿದ್ದರಿಂದ ವೈದ್ಯರು ಹೃದಯ ಕಸಿಗೆ ನಿರ್ಧರಿಸಿದ್ದರು. ಈ ಹಿನ್ನಲೆ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ ಹಸಿರು ಮಾರ್ಗ ಸ್ಥಾಪನೆಗೆ ಮನವಿ ಮಾಡಲಾಯಿತು. ಯಶೋಧಾ ಆಸ್ಪತ್ರೆಯಿಂದ ಬೆಳಗ್ಗೆ 8.10ಗಂಟೆಗೆ ಹೃದಯವನ್ನು ಅಂಬ್ಯುಲೆನ್ಸ್ ಮೂಲಕ 7.1 ಕಿ.ಮೀ ದೂರದ ಎನ್ಐಎಂಇಎಸ್ಗೆ 8 ನಿಮಿಷದಲ್ಲಿ ಸಾಗಿಸಲಾಯಿತು.