ಪ್ರತಿಯೊಬ್ಬ ಪಾಲಕರು ಕೂಡಾ ತಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಒಳ್ಳೆಯ ಶಾಲೆಗಳಿಗೆ ದಾಖಲಿಸಿ ಶಿಕ್ಷಣ ಕೊಡಿಸುತ್ತಾರೆ. ಆದ್ರೂ, ಎಷ್ಟೋ ಮಕ್ಕಳು 'ಅಮ್ಮ ಎಷ್ಟು ಓದಿದರೂ ನೆನಪಿಲ್ಲ' ಎಂದು ಹೇಳುತ್ತಿರುತ್ತಾರೆ. ಇದರಿಂದ ಕಷ್ಟಪಟ್ಟು ಓದಿದರೂ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಾರೆ. ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹಾಗೂ ಏಕಾಗ್ರತೆ ಕಡಿಮೆಯಾಗಲು ಸಮತೋಲಿತ ಆಹಾರ ಸೇವಿಸದಿರುವುದು ಮುಖ್ಯ ಕಾರಣ ಎನ್ನುತ್ತಾರೆ ಆರೋಗ್ಯ ತಜ್ಞರು. ದೀರ್ಘಕಾಲ ಓದಿದ್ದನ್ನು ನೆನಪಿಟ್ಟುಕೊಳ್ಳಲು, ಮೆದುಳು ಸಕ್ರಿಯವಾಗಿರಲು ಮಕ್ಕಳಿಗೆ ಕೆಲವು ಆಹಾರಗಳನ್ನು ಹೆಚ್ಚು ನೀಡಲು ಸೂಚಿಸಲಾಗುತ್ತದೆ.
ಬೆರ್ರಿ ಹಣ್ಣುಗಳು:ಬೆರ್ರಿಗಳು ಆಕ್ಸಿಡೀಕರಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಮಕ್ಕಳಿಗೆ ಬ್ಲೂಬೆರ್ರಿ, ಬ್ಲ್ಯಾಕ್ ಬೆರ್ರಿ, ಚೆರ್ರಿ, ಸ್ಟ್ರಾಬೆರಿಗಳನ್ನು ಆಗಾಗ ನೀಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ಓಟ್ಸ್: ಓಟ್ಸ್‌ನಲ್ಲಿ ಪೊಟ್ಯಾಸಿಯಮ್, ಸತು, ವಿಟಮಿನ್ ಇ ಮತ್ತು ಬಿ ಯಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಫೈಬರ್ ಕೂಡ ಹೇರಳವಾಗಿದೆ. ಮಕ್ಕಳಿಗೆ ಬೆಳಗ್ಗಿನ ಉಪಹಾರದಲ್ಲಿ ಓಟ್ಸ್ ನೀಡುವುದರಿಂದ ಮೆದುಳು ಆರೋಗ್ಯವಾಗಿರುವುದರ ಜೊತೆಗೆ ಶಕ್ತಿ ನೀಡುತ್ತದೆ.
2018ರಲ್ಲಿ 'ನ್ಯೂಟ್ರಿಷಿಯನ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳಗಿನ ಉಪಹಾರಕ್ಕಾಗಿ ಹೆಚ್ಚು ಓಟ್ಸ್ ಸೇವಿಸುವ ಮಕ್ಕಳಲ್ಲಿ ಕಡಿಮೆ ಓಟ್ಸ್ ತಿನ್ನುವವರಿಗಿಂತ ಉತ್ತಮ ಸ್ಮರಣೆ ಮತ್ತು ಏಕಾಗ್ರತೆ ಇರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಮೆರಿಕದ ಹೂಸ್ಟನ್‌ನಲ್ಲಿರುವ ಟೆಕ್ಸಾಸ್ A&M ವಿಶ್ವವಿದ್ಯಾಲಯದ ಡಾ.ಡೇವಿಡ್ ಡೊನಾಲ್ಡ್‌ಸನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ಕಡಲೆಕಾಯಿ: ಕಡಲೆಕಾಯಿಯಲ್ಲಿ ಮೆಗ್ನೀಸಿಯಮ್, ವಿಟಮಿನ್ ಇ, ಸತು ಮತ್ತು ಥಯಾಮಿನ್‌ನಂತಹ ಪೋಷಕಾಂಶಗಳಿವೆ. ಇದು ಮೆದುಳಿನ ಸಕ್ರಿಯ ಕಾರ್ಯನಿರ್ವಹಣೆಗೆ ಅಗತ್ಯ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಜ್ಞಾಪಕ ಶಕ್ತಿ ವೃದ್ಧಿಸುತ್ತದೆ.