ನವದೆಹಲಿ:ಭಾರತದಲ್ಲಿ ಒಂದೇ ದಿನದಲ್ಲಿ 157 ಕೋವಿಡ್ 19 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟಾರೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 1,496 ಇದೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಕೋವಿಡ್ನಿಂದಾಗಿ ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಎರಡು ಸಾವು ವರದಿಯಾಗಿದ್ದು, ಛತ್ತೀಸ್ಗಢ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕಿತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದ ವರದಿಯಲ್ಲಿ ಕಾಣಬಹುದಾಗಿದೆ. ಡಿಸೆಂಬರ್ 5ರಿಂದ ಏರಿಕೆ ಕಾಣುತ್ತಿದ್ದ ಕೋವಿಡ್ ಪ್ರಕರಣಗಳು ಇದೀಗ ಇಳಿಕೆಯ ಹಾದಿಯಲ್ಲಿದೆ. ಹವಾಮಾನ ಬದಲಾವಣೆಯಿಂದಾಗಿ ಜೆಎನ್.1 ಸೋಂಕು ವೇಗವಾಗಿ ಹರಡುತ್ತಿತ್ತು. ಡಿಸೆಂಬರ್ 5ರಂದು ಒಂದೇ ದಿನದಲ್ಲಿ 841 ಪ್ರಕರಣಗಳು ದಾಖಲಾಗಿದ್ದು, ಡಿಸೆಂಬರ್ 5 ರಿಂದ ಡಿಸೆಂಬರ್ 31ರವರೆಗೆ ಕೋವಿಡ್ ಪ್ರಕರಣದ ಏರಿಕೆ 0.2ರಷ್ಟಿತು.
ಕರ್ನಾಟಕ, ಕೇರಳ ಸೇರಿದಂತೆ 11 ರಾಜ್ಯದಲ್ಲಿ ಜೆಎನ್.1 ಸೋಂಕು ಪ್ರಬಲವಾಗಿ ಹರಡುವಿಕೆ ದರವನ್ನು ಹೊಂದಿತು. ಈ ಸೋಂಕು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದ್ದು, ಜೀವ ಹಾನಿಯಂತಹ ಗಂಭೀರತೆ ಸೃಷ್ಟಿಸುವುದಿಲ್ಲ. ಆದರೆ, ಸೋಂಕಿನ ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದರು.